ADVERTISEMENT

ಪಾದಚಾರಿ ಮಾರ್ಗ: ನಡೆಯುವ ದಾರಿ ಕಸಿಯದಿರಿ

ಒತ್ತುವರಿ ವಿರುದ್ಧ ಮೊಳಗಿದ ಕಹಳೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 19:31 IST
Last Updated 6 ಫೆಬ್ರುವರಿ 2021, 19:31 IST
ಶೇಷಾದ್ರಿಪುರದಲ್ಲಿ ಪಾದಚಾರಿ ಮಾರ್ಗದ ದುಃಸ್ಥಿತಿ ಇದು– ಪ್ರಜಾವಾಣಿ ಚಿತ್ರ
ಶೇಷಾದ್ರಿಪುರದಲ್ಲಿ ಪಾದಚಾರಿ ಮಾರ್ಗದ ದುಃಸ್ಥಿತಿ ಇದು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪಾದಚಾರಿ ಮಾರ್ಗ ನಮ್ಮ ಹಕ್ಕು. ಅದನ್ನು ಕಿತ್ತುಕೊಳ್ಳಬೇಡಿ. ಒತ್ತುವರಿ ನಿಲ್ಲಿಸಿ. ನಾವು ನಡೆಯಲು ಉಳಿದಿರುವ ಅಲ್ಪಸ್ವಲ್ಪ ಜಾಗವನ್ನೂ ಕಬಳಿಸದಿರಿ...’

ಪಾದಚಾರಿ ಮಾರ್ಗಗಳನ್ನು ರಕ್ಷಿಸುವ ಸಲುವಾಗಿ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ನಗರದಲ್ಲಿ ಶನಿವಾರ ಮೊಳಗಿದ ಕಹಳೆ ಇದು.

ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯು ಕುಮಾರಪಾರ್ಕ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶೇಷಾದ್ರಿಪುರ ಸಂಜೆ ಕಾಲೇಜಿನ ಜೊತೆ ಸೇರಿ ಹಮ್ಮಿಕೊಂಡಿದ್ದ ‘ಈಗ ಫುಟ್‌ಪಾತ್‌ ನಮ್ದೇ’ ಅಭಿಯಾನದ ಅಂಗವಾಗಿ ನೂರಾರು ಮಂದಿ ಬೀದಿಗಿಳಿದರು.

ADVERTISEMENT

ಶೇಷಾದ್ರಿಪುರ ಸಂಜೆ ಕಾಲೇಜಿನಿಂದ ಕಾಲ್ನಡಿಗೆಯಲ್ಲೇ ಹೊರಟ ಪ್ರತಿಭಟನಾಕಾರರು ಶೇಷಾದ್ರಿಪುರ ಮುಖ್ಯರಸ್ತೆಯಿಂದ ಮಂತ್ರಿಮಾಲ್‌ವರೆಗೆ ಸುಮಾರು ಒಂದೂವರೆ ಕಿ.ಮೀ ದೂರ ಸಾಗಿದರು. ದಾರಿಯುದ್ದಕ್ಕೂ ಎಲ್ಲೆಲ್ಲ ಪಾದಚಾರಿ ಮಾರ್ಗ ಒತ್ತುವರಿ ಆಗಿದೆ, ನಡೆದಾಡುವಾಗ ಹಿರಿಯ ನಾಗರಿಕರು, ಚಿಣ್ಣರು, ಅಂಗವಿಕಲರು ಹಾಗೂ ಸಾಮಾನ್ಯ ನಾಗರಿಕರೂ ಏನೆಲ್ಲ ಸಮಸ್ಯೆ ಎದುರಿಸುತ್ತಾರೆ ಎಂಬುದನ್ನು ದಾಖಲೀಕರಿಸಿದರು.

ಅಂಗವಿಕಲ ಕ್ರೀಡಾಪಟು ವೆಂಕಟೇಶ್‌ ಯೇತಿರಾಜ್‌, ನಟಿ ಶ್ರುತಿ ಹರಿಹರನ್ ಈ ಅಭಿಯಾನವನ್ನು ಬೆಂಬಲಿಸಿದರು.

‘ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ಹೊಂದುವುದು ನಗರದ ನಿವಾಸಿಗಳ ಹಕ್ಕು. ಪಾದಚಾರಿಗಳ ಸುರಕ್ಷತೆಗ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲು ನಾನು ಈ ಅಭಿಯಾನದಲ್ಲಿ ಕೈಜೋಡಿಸಿದ್ದೇನೆ’ ಎಂದು ಶ್ರುತಿ ಹರಿಹರನ್‌ ಹೇಳಿದರು.

ಅಸುರಕ್ಷಿತ ಪಾದಚಾರಿ ಮಾರ್ಗಗಳು ಜನರ ಜೀವವನ್ನು ಹಾಗೂ ಅವರ ಕೈಕಾಲುಗಳನ್ನು ಅಪಾಯಕ್ಕೊಡ್ಡಿವೆ. ಆಡಳಿತ ವ್ಯವಸ್ಥೆಯ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಪಾದಚಾರಿಗಳು ವರ್ಷಪೂರ್ತಿ ಸಮಸ್ಯೆ ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೀಕರಣ ಬ್ಯೂರೊ (ಎನ್‌ಸಿಆರ್‌ಬಿ) ವರದಿ ಪ್ರಕಾರ ನಗರದಲ್ಲಿ 2019ರಲ್ಲಿ 272 ಪಾದಚಾರಿಗಳು ಮೃತಪಟ್ಟಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆ ಹೇಳಿದೆ.

ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿವೆ. ಆದರೆ, ಹೊಸ ಒತ್ತುವರಿಗಳು ನಡೆಯುತ್ತಲೇ ಇವೆ. ಕಾಮಗಾರಿ ಸಲುವಾಗಿ ಫುಟ್‌ಪಾತ್‌ ಅಗೆಯುವುದಕ್ಕೆ ಕೊನೆ ಎಂಬುದೇ ಇಲ್ಲ. ಅಲ್ಲಲ್ಲಿ ರಾಶಿ ಹಾಕಿರುವ ಕಟ್ಟಡ ಸಾಮಗ್ರಿಗಳು ಜನ ಇವುಗಳಲ್ಲಿ ನಡೆಯದ ವಾತಾವರಣ ಸೃಷ್ಟಿಸಿವೆ. ಕೆಲವೆಡೆ ಕಸವನ್ನೂ ಪಾದಚಾರಿ ಮಾರ್ಗಗಳಲ್ಲೇ ರಾಶಿ ಹಾಕಲಾಗುತ್ತಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಬಿಬಿಎಂಪಿಯ ರಾಜಕಾಲುವೆ ಕಾಮಗಾರಿ, ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಯಿಂದಾಗಿ ಫುಟ್‌ಪಾತ್‌ಗಳು ಎಷ್ಟು ಹದಗೆಟ್ಟಿವೆ, ಬೆಸ್ಕಾಂನವರು ಅಳವಡಿಸುವ ವಿದ್ಯುತ್‌ ಪರಿವರ್ತಕ ನಡೆದುಹೋಗುವವರಿಗೆ ಏನೆಲ್ಲ ಸಮಸ್ಯೆ ಸೃಷ್ಟಿಸುತ್ತಿದೆ ಎಂಬುದನ್ನು ಪ್ರತಿಭಟನಾಕಾರರು ಪುರಾವೆ ಸಮೇತ ಬಿಚ್ಚಿಟ್ಟರು. ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲ್ಲಿಸಿದರೂ ಸಂಚಾರ ಪೊಲೀಸರು ದಿವ್ಯ ಮೌನ ವಹಿಸುವುದನ್ನು ಪ್ರಶ್ನಿಸಿದರು.

ಕಾಮಗಾರಿ ನಡೆಸುವಾಗ ಸಮನ್ವಯ ಕಾಪಾಡಲು ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ನಗರಾಭಿವೃದ್ಧಿ ಇಲಾಖೆ, ನಗರ ಭೂಸಾರಿಗೆ ನಿರ್ದೇಶನಾಲಯ ಹಾಗೂ ಸಂಚಾರ ಪೊಲೀಸ್ ಇಲಾಖೆಗಳು ಪ್ರತಿ ತಿಂಗಳು ಸಭೆ ನಡೆಸಬೇಕು, ಪಾದಚಾರಿಗಳಿಗೆ ಆಗುವ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಪಾದಚಾರಿಗಳ ಸುರಕ್ಷತೆ ಕಾಪಾಡಲು ಪ್ರತಿ ವಲಯಕ್ಕೂ ವಿಶೇಷ ಆಯುಕ್ತರನ್ನು ನೇಮಿಸಬೇಕು. ಆಗ ಪಾದಚಾರಿಗಳೂ ನೋವು ಹೇಳಿಕೊಳ್ಳಲು ಅವಕಾಶ ಸಿಗುತ್ತದೆ. ಬೇಕಾಬಿಟ್ಟಿ ಅಗೆಯುವುದಕ್ಕೂ ಕಡಿವಾಣ ಬೀಳುತ್ತದೆ. ವಾರ್ಡ್‌ ಸಮಿತಿಗಳೂ ಪಾದಚಾರಿ ಮಾರ್ಗ ಸಂರಕ್ಷಣೆಗೆ ಸಲಹೆ ಸೂಚನೆ ನೀಡುವ ಮೂಲಕ ವಿಶೇಷ ಆಯುಕ್ತರಿಗೆ ನೆರವಾಗಬಹುದು’ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ತಾರಾ ಕೃಷ್ಣಸ್ವಾಮಿ ಸಲಹೆ ನೀಡಿದರು.

***

ನಾನು ಬಾಲ್ಯದಲ್ಲಿ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದೆ. ಆದರೆ ಈಗ ಇದು ಸಾಧ್ಯವೇ ಇಲ್ಲ. ಪರಿಸ್ಥಿತಿ ಅಷ್ಟೊಂದು ಕೆಟ್ಟದಾಗಿದೆ
ಶ್ರುತಿ ಹರಿಹರನ್‌, ನಟಿ

***

ನಗರದಲ್ಲಿ ಪಾದಚಾರಿಗಳು ಅಬ್ಬೆಪಾರಿಗಳಾಂತಾಗಿದ್ದಾರೆ. ಪಾದಚಾರಿ ಮಾರ್ಗಗಳನ್ನು ಹಾಗೂ ರಸ್ತೆಗಳನ್ನು ಬೇಕಾಬಿಟ್ಟಿ ಅಗೆದು ಹಾಕಲಾಗುತ್ತಿದೆ. ನಡೆದು ಸಾಗುವವರ ನೋವು ಕೇಳುವರಿಲ್ಲ
ತಾರಾ ಕೃಷ್ಣಸ್ವಾಮಿ, ಸಿಟಿಜನ್ಸ್‌ ಫಾರ್‌ ಬೆಂಗಳೂರು

***

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಅಡೆತಡೆಗಳಿಲ್ಲದ ಪಾದಚಾರಿ ಮಾರ್ಗ ಬಲು ಮುಖ್ಯ. ಪಾದಚಾರಿಗಳ ಜೀವ ಹಾಗೂ ಅವರ ಕೈಕಾಲುಗಳಿಗೂ ಬೆಲೆ ಇದೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು
ಚಿತ್ರಾ ವೆಂಕಟೇಶ್‌, ಕುಮಾರಪಾರ್ಕ್‌ ಆರ್‌ಡಬ್ಲುಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.