ಬೆಂಗಳೂರು: ‘ಹಳೇ ಬಟ್ಟೆಗಳನ್ನು ಬಿಸಾಡುವ ಬದಲು ತೊಳೆದು, ಇಸ್ತ್ರಿ ಹಾಕಿ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿಗೆ ತಂದು ಕೊಡಿ. ನಾವು ಅದನ್ನು ಮರುಬಳಕೆ ಮಾಡುತ್ತೇವೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ತಿಳಿಸಿದರು.
ನಗರದಲ್ಲಿ ಬುಧವಾರ ನಡೆದ ‘ಹಳೆಯ ಬಟ್ಟೆಗಳ ಸಂಗ್ರಹ, ವಿಲೇವಾರಿ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಹಳೆಯ ಬಟ್ಟೆಗಳನ್ನು ಇನ್ನೊಬ್ಬರು ತೊಡಬಾರದು ಎಂಬುದು ಮೂಢನಂಬಿಕೆ. ಯಾರೂ ಬೇಕಾದರೂ ಬಳಸಬಹುದು ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್, ಬಿಬಿಸಿ ಆ್ಯಕ್ಷನ್ ಮೀಡಿಯಾದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಳೆ ಬಟ್ಟೆ, ವಸ್ತ್ರಗಳ ಮರು ಬಳಕೆ ನಿರ್ವಹಣಾ ಅಭಿಯಾನಕ್ಕೆ ಬಿಬಿಸಿ ಆ್ಯಕ್ಷನ್ ಮೀಡಿಯಾದ ಭಾರತದ ನಿರ್ದೇಶಕಿ ವರಿಂದರ್ ಗಂಭೀರ್ ಚಾಲನೆ ನೀಡಿದರು.
ಹಳೆಯ ಬಟ್ಟೆಗಳ ಮರು ಬಳಕೆ ಆಂದೋಲನ ಕುರಿತು ಸಮಾಜ ಸೇವಕಿ ರೀತು ಗಂಜಿಗಟ್ಟಿ ವಿವರ ನೀಡಿದರು. ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಸಹಾಯಕ ಆಯುಕ್ತ ಮೋಹನ್ ಕೊಂಡಜ್ಜಿ, ರಾಜ್ಯ ಕಾರ್ಯದರ್ಶಿ ಕೆ. ಗಂಗಪ್ಪಗೌಡ, ರಾಜ್ಯ ಆಯುಕ್ತೆ ಬಿ.ವಿ.ರಾಮಲತಾ, ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಶೇಷಾದ್ರಿ, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.