ADVERTISEMENT

ಬೆಂದ್ರೆ ಕವಿತೆಗಳಲ್ಲಿ ತತ್ವದ ಮಾಧುರ್ಯ: ಎಸ್‌.ಆರ್.ವಿಜಯಶಂಕರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 13:11 IST
Last Updated 31 ಜನವರಿ 2026, 13:11 IST
<div class="paragraphs"><p>‘ಬೆಂಗಳೂರು ವಕೀಲರ ಸಂಘ’ದ ಪದಾಧಿಕಾರಿ ವೀಣಾ ರಾವ್‌ ಅವರಿಗೆ ಪದಾಂಕಿತ ಹಿರಿಯ ವಕೀಲ ಸಿ.ಆರ್‌.ಗೋಪಾಲ ಸ್ವಾಮಿ ಬೇಂದ್ರೆಯವರ ಕುರಿತಾದ ಪುಸ್ತಿಕೆ ನೀಡಿ ಗೌರವಿಸಿದರು. ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ ಬಿ.ಗೌಡ (ಎಡದಿಂದ ಮೊದಲನೆಯವರು) ಮತ್ತು ವಿಮರ್ಶಕ ಎಸ್‌.ಆರ್‌.ವಿಜಯಶಂಕರ ಇದ್ದರು.</p></div>

‘ಬೆಂಗಳೂರು ವಕೀಲರ ಸಂಘ’ದ ಪದಾಧಿಕಾರಿ ವೀಣಾ ರಾವ್‌ ಅವರಿಗೆ ಪದಾಂಕಿತ ಹಿರಿಯ ವಕೀಲ ಸಿ.ಆರ್‌.ಗೋಪಾಲ ಸ್ವಾಮಿ ಬೇಂದ್ರೆಯವರ ಕುರಿತಾದ ಪುಸ್ತಿಕೆ ನೀಡಿ ಗೌರವಿಸಿದರು. ಬೆಂಗಳೂರು ವಕೀಲರ ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ ಬಿ.ಗೌಡ (ಎಡದಿಂದ ಮೊದಲನೆಯವರು) ಮತ್ತು ವಿಮರ್ಶಕ ಎಸ್‌.ಆರ್‌.ವಿಜಯಶಂಕರ ಇದ್ದರು.

   

ಬೆಂಗಳೂರು: ‘ಬೇಂದ್ರೆಯವರ ಕಾಲಘಟ್ಟದಲ್ಲಿನ ನವೋದಯ ಸಾಹಿತ್ಯದ ಮೇಲೆ ಕವಿ ರವೀಂದ್ರನಾಥ ಟಾಗೋರ್, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ ಘೋಷ್‌ ಮತ್ತು ಇತಿಹಾಸಕಾರ ಹಾಗೂ ತತ್ವಜ್ಞಾನಿಯಾಗಿದ್ದ ಆನಂದಕುಮಾರ ಸ್ವಾಮಿಯವರ ಪ್ರಭಾವ ಅಗಾಧವಾದುದು’ ಎಂದು ವಿಮರ್ಶಕ ಎಸ್‌.ಆರ್.ವಿಜಯಶಂಕರ ಅಭಿಪ್ರಾಯಪಟ್ಟರು.

‘ಬೆಂಗಳೂರು ವಕೀಲರ ಸಾಹಿತ್ಯ ಕೂಟ’ದ ವತಿಯಿಂದ ಶನಿವಾರ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿರುವ ವಕೀಲರ ಸಭಾಂಗಣದಲ್ಲಿ ದ.ರಾ ಬೇಂದ್ರೆಯವರ ಜನ್ಮದಿನದ ಅಂಗವಾಗಿ ಅವರ ಕಾವ್ಯದ ಕುರಿತು ಉಪನ್ಯಾಸ ನೀಡಿದರು.

ADVERTISEMENT

‘ಪದಗಳ ಬಗ್ಗೆ ಅನುಪಮ ವ್ಯಾಮೋಹ ಹೊಂದಿದ್ದ ಬೇಂದ್ರೆಯವರ ಮನೆಯ ಪುಸ್ತಕದ ಕಪಾಟಿನಲ್ಲಿ 430ಕ್ಕೂ ಹೆಚ್ಚು ನಿಘಂಟುಗಳಿದ್ದವು. ಅವರ ಕವಿತೆಗಳಲ್ಲಿ ತತ್ವ ತುಂಬಿ ತುಳುಕಾಡುತ್ತಿತ್ತು. ಅವರ ಪದಗಳಲ್ಲಿನ ಧಾತು ಹೊಸಹೊಸ ಅರ್ಥಗಳನ್ನು ಸೃಜಿಸುತ್ತಾ, ಹಾಸ್ಯ, ಮೊನಚು ಮತ್ತು ಜೀವನದ ಗಂಭೀರತೆಯನ್ನು ಪ್ರತಿಧ್ವನಿಸುತ್ತಿದ್ದವು’ ಎಂದು ಬಣ್ಣಿಸಿದರು.

‘ಐಂದ್ರಿಕ, ಬೌದ್ಧಿಕ, ಆಧ್ಯಾತ್ಮಿಕ ಮತ್ತು ಸತ್ಯ ಸೌಂದರ್ಯಗಳಿಂದ ಹರಳುಗಟ್ಟಿದ ಬೇಂದ್ರೆಯವರ ನಾಕು ತಂತಿ ಕವಿತೆ ಅವರ 45 ವರ್ಷಗಳ ಅಧ್ಯಾತ್ಮದ ಹುಡುಕಾಟದ ಫಲ. ಪ್ರತಿ ಬಾರಿ ಓದಿದಾಗಲೂ ಅದರಲ್ಲೊಂದು ನವನವೀನ ಹೊಳಹು ಕಾಣುತ್ತದೆ. ಅವರ ಕಾವ್ಯದ ಶಕ್ತಿ ಅಸಾಮಾನ್ಯ’ ಎಂದು ಬೇಂದ್ರೆಯವರ ಹಲವಾರು ಕವಿತೆಗಳನ್ನು ವಿಶ್ಲೇಷಿಸಿದರು.

ಮುಖ್ಯ ಅತಿಥಿಯಾಗಿದ್ದ ಪದಾಂಕಿತ ಹಿರಿಯ ವಕೀಲ ಸಿ.ಆರ್.ಗೋಪಾಲ ಸ್ವಾಮಿ, ‘ಸೃಷ್ಟಿಯ ಆರಾಧಕರಾಗಿದ್ದ ಬೇಂದ್ರೆಯವರ ಕವಿತೆಯಲ್ಲಿ ಜಾನಪದೀಯ ಸೊಗಡಿತ್ತು. ಇಂದು ಅನೇಕರು ಒಬ್ಬ ಕವಿಯನ್ನು ಮತ್ತೊಬ್ಬ ಕವಿಗೆ ಹೋಲಿಸುವ ಚಟ ಬೆಳೆಸಿಕೊಂಡಿದ್ದಾರೆ. ಇದು ಒಳ್ಳೆಯದಲ್ಲ. ಯಾವುದೇ ಕವಿ ಮತ್ತೊಬ್ಬ ಕವಿಗಿಂತಲೂ ಭಿನ್ನ’ ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ವಿ.ಆನಂದ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ವಿ.ಅನುಪಮಾ, ಕೆ.ಪಿ.ಸರಸ್ವತಿ, ಬಿ.ಅಮೃತಾ, ರೇಣುಕಾದೇವಿ, ವೈ.ಜೆ. ಜೈಂಕರ್‌, ಎನ್‌.ರಾಮಮೂರ್ತಿ,ಎಚ್‌.ಪಿ.ಅಶ್ವಿನ್‌ ಕುಮಾರ್ ಮತ್ತು ಎನ್‌.ಗಣೇಶ್‌, ಹಿರಿಯ ವಕೀಲ ಜಗದೀಶ್‌ ಮುಂಡರಗಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.