ಕಾರ್ಯಕ್ರಮದಲ್ಲಿ ರಾಧಾ ಆರ್., ಆನಂದ್‌ರಾಜ್ ದೇಶಪ್ಪ ತವರ್‌ದಾರ್, ವಿಶ್ವ ವಿನ್ಯಾಸ್ ಅವರಿಗೆ ‘ಡಾ. ಪದ್ಮನಿ ಮಕ್ಕಳ ಹಕ್ಕುಗಳ ಪ್ರಶಸ್ತಿ’ಯನ್ನು ಎಸ್.ವಿ. ಮಂಜುನಾಥ್ ಅವರು ಪ್ರದಾನ ಮಾಡಿದರು. ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮಾ ಸಿ.ಎನ್., ಸಿವಿಕ್ ಸಂಸ್ಥೆಯ ರಾಜರಾಜೇಶ್ವರಿ, ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ.
ಬೆಂಗಳೂರು: ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ರಾಧಾ ಆರ್. ಮತ್ತು ಕಲಬುರಗಿಯ ಆನಂದ್‌ರಾಜ್ ದೇಶಪ್ಪ ತವರ್‌ದಾರ್ ಅವರಿಗೆ ‘ಡಾ. ಪದ್ಮಿನಿ ಮಕ್ಕಳ ಹಕ್ಕುಗಳ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ 15 ವರ್ಷಗಳ ನಿರಂತರ ಕಾರ್ಯನಿರ್ವಹಣೆಯನ್ನು ಪರಿಗಣಿಸಿ, ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಕಲಾವಿದ ವಿಶ್ವ ವಿನ್ಯಾಸ್ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಪ್ರದಾನ ಮಾಡಿ, ಗೌರವಿಸಲಾಯಿತು. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹ ನಿರ್ದೇಶಕ ಎಸ್.ವಿ. ಮಂಜುನಾಥ್ ಅವರು ವಿಶೇಷ ಉಪನ್ಯಾಸ ನೀಡಿದರು.
ಇದೇ ವೇಳೆ ಟ್ರಸ್ಟ್ 2025ನೇ ಸಾಲಿಗೆ ನೀಡುವ ‘ಡಾ.ಪದ್ಮಿನಿ ಮಕ್ಕಳ ಹಕ್ಕುಗಳ ಫೆಲೋಶಿಪ್’ಗೆ ಆಯ್ಕೆಯಾದವರ ಹೆಸರನ್ನು ಘೋಷಿಸಲಾಯಿತು. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಒಂದು ವರ್ಷದ ಈ ಫೆಲೋಶಿಪ್‌ಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನವೀನ್ ಕುಮಾರ್ ಬಿ., ತುಮಕೂರಿನ ಭವ್ಯ ಎನ್., ಕೊಪ್ಪಳದ ಮಂಜುಳ ಕುಡಗುಂಟಿ, ಸುಭಾನ್ ಸಾಬ್, ವಿಜಯನಗರದ ನಾಗರಾಜ್ ಕೆ. ಹಾಗೂ ಚಿಕ್ಕಬಳ್ಳಾಪುರದ ಗಾಯತ್ರಿ ಪಿ. ಅವರು ಆಯ್ಕೆಯಾಗಿರುವುದಾಗಿ ಟ್ರಸ್ಟ್‌ನ ನಾಗಮಣಿ ಸಿ.ಎನ್ ಘೋಷಿಸಿದರು.
‘ಈ ಫೆಲೋಶಿಪ್‌ಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳ ಕುರಿತು ತರಬೇತಿ ಮತ್ತು ಕ್ಷೇತ್ರಾನುಭವ ನೀಡಲಾಗುತ್ತದೆ. ತಮ್ಮ ಜಿಲ್ಲೆಗಳಲ್ಲಿ ನಿರ್ದಿಷ್ಟ ಗ್ರಾಮ ಪಂಚಾಯಿತಿ ಪ್ರದೇಶಗಳನ್ನು ಆಯ್ಕೆ ಮಾಡಿ, ಅಲ್ಲಿ ಮಕ್ಕಳ ಹಕ್ಕುಗಳ ಸಂವೇದನೆ ಬೆಳೆಸಲು ಸ್ಥಳೀಯ ಸಂಸ್ಥೆಗಳು, ಸೇವಾ ಪೂರೈಕೆದಾರರು, ಸಮುದಾಯ ಮತ್ತು ಮಕ್ಕಳೊಂದಿಗೆ ಕೆಲಸ ಮಾಡುತ್ತಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.