ADVERTISEMENT

ಡಾ.ರಾಜ್‌ ಜನ್ಮದಿನ: ಅಭಿಮಾನಿಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 16:17 IST
Last Updated 24 ಏಪ್ರಿಲ್ 2025, 16:17 IST
ಡಾ. ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಪುಷ್ಪ ನಮನ ಸಲ್ಲಿಸಿದರು
ಡಾ. ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಪುಷ್ಪ ನಮನ ಸಲ್ಲಿಸಿದರು   

ಬೆಂಗಳೂರು: ನಗರದ ವಿವಿಧೆಡೆ ವರನಟ ದಿವಂಗತ ಡಾ.ರಾಜ್‌ಕುಮಾರ್‌ ಅವರ 97ನೇ ಜನ್ಮದಿನವನ್ನು ಅಭಿಮಾನಿಗಳು ಗುರುವಾರ ಸಡಗರದಿಂದ ಆಚರಿಸಿದರು.

ರಾಜ್‌ಕುಮಾರ್ ಪ್ರತಿಮೆಗೆ ಹೂವಿನ ಹಾರ ಹಾಕಿ, ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಜನ್ಮದಿನದ ಅಂಗವಾಗಿ ನಗರದ ವಿವಿಧೆಡೆ ರಕ್ತದಾನ ಮತ್ತು ನೇತ್ರದಾನ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಯಿತು. 

ಮಲ್ಲೇಶ್ವರದ ಸೇವಾ ಸದನದಲ್ಲಿ ರಾಜ್‌ಕುಮಾರ್‌ ಅವರ ಜನ್ಮದಿನದ ನೆನಪಿನಲ್ಲಿ ರಾಜ್‌ಕುಮಾರ್‌ ಅವರು ನಟಿಸಿರುವ ಹಳೆ ಚಲನಚಿತ್ರ ಗೀತೆಗಳು, ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಿತು. 

ADVERTISEMENT

ಚಲನಚಿತ್ರ ಕ್ಷೇತ್ರಕ್ಕೆ ರಾಜ್‌ ಕೊಡುಗೆ ಅಪಾರ: ಕರ್ನಾಟಕ ರತ್ನ, ಕನ್ನಡದ ಸಾರ್ವಭೌಮ ಎಂಬ ಬಿರುದುಗಳಿಗೆ ಭಾಜನರಾಗಿದ್ದ ರಾಜ್‌ಕುಮಾರ್ ಅವರು ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಹೇಳಿದರು.

ಬೆಂಗಳೂರು ನಗರ ಜಿಲ್ಲಾಡಳಿತದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಾಜ್‌ಕುಮಾರ್ ಅವರ 97ನೇ ಜನ್ಮದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕನ್ನಡ ಕಲೆ, ಸಾಹಿತ್ಯಕ್ಕೆ ಕೀರ್ತಿಯನ್ನು ತಂದುಕೊಟ್ಟ ಶ್ರೇಯಸ್ಸು ರಾಜ್‌ಕುಮಾರ್‌ ಅವರಿಗೆ ಸಲ್ಲುತ್ತದೆ. ಅವರು ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪೌರಾಣಿಕ ಹಾಗೂ ಐತಿಹಾಸಿಕ ಪಾತ್ರಗಳಿಗೆ ಜೀವತುಂಬಿದ್ದಾರೆ. ಗೋಕಾಕ್ ಚಳವಳಿಯಲ್ಲಿ ಭಾಗಿಯಾಗುವ ಮೂಲಕ ಕನ್ನಡಿಗರ ಭಾಷಾಭಿಮಾನವನ್ನು ಬಡಿದೆಬ್ಬಿಸಿದ್ದರು ಎಂದು ಮೆಲುಕುಹಾಕಿದರು. 

ಇದೇ ಸಂದರ್ಭದಲ್ಲಿ ರಾಜಕುಮಾರ್ ಅವರು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಿದ್ದ ಯೋಗಾಭ್ಯಾಸದ ಅನುಕೂಲಗಳ ಕುರಿತು ಯುವಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಜಾಜಿನಗರದ ಎಸ್.ಜೆ.ಆರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಭಂಗಿಗಳ ಯೋಗಾಸನಗಳನ್ನು ಪ್ರದರ್ಶಿಸಿದರು.

ಜೋಗಿಲ ಸಿದ್ಧರಾಜು ಅವರ ‘ಸಂಭ್ರಮ’ ಕಲಾತಂಡದವರು ರಾಜ್‌ಕುಮಾರ್ ಅವರ ಜನಪ್ರಿಯ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿದರು. 

ಯಲಹಂಕ ವರದಿ: ಇಲ್ಲಿನ ನಗರ್ತಪೇಟೆ ರಸ್ತೆಯಲ್ಲಿರುವ ರಣಧೀರ ಕಂಠೀರವ ಡಾ.ರಾಜಕುಮಾರ್‌ ಅಭಿಮಾನಿಗಳ ಸಂಘದ ವತಿಯಿಂದ ವರನಟ ರಾಜ್‌ಕುಮಾರ್‌ ಅವರ 97ನೇ ಜನ್ಮದಿನವನ್ನು ಆಚರಿಸಲಾಯಿತು.

ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದ ಅಭಿಮಾನಿಗಳು, ಕೇಕ್‌ ಕತ್ತರಿಸಿ, ಸಿಹಿಹಂಚಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು. ಅನ್ನದಾನ ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷ ನಾರಾಯಣ, ಪದಾಧಿಕಾರಿಗಳಾದ ನಾಗರಾಜ್‌, ಭಾಸ್ಕರ್‌, ಶೇಖರ್‌, ಶಕ್ತಿಗ್ರೂಪ್‌ನ ಮಂಜುನಾಥ್‌, ನರೇಂದ್ರಕುಮಾರ್‌, ಪ್ರವೀಣ್‌, ಅಪ್ಪಿ, ಸುಮಂತ್‌, ಬಾಲಾಜಿ, ನಾಗಾರ್ಜುನ, ದಶರಥ, ವೀರಭದ್ರ.ವೈ.ಸಿ, ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಯಲಹಂಕದ ನಗರ್ತಪೇಟೆ ರಸ್ತೆಯಲ್ಲಿ ರಣಧೀರ ಕಂಠೀರವ ಡಾ.ರಾಜಕುಮಾರ್‌ ಅಭಿಮಾನಿಗಳ ಸಂಘದ ವತಿಯಿಂದ ಡಾ.ರಾಜ್‌ ಅವರ ಜನ್ಮದಿನವನ್ನು ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.