ADVERTISEMENT

ಇಂದು ಡಾ.ರಾಜಕುಮಾರ್ 91ನೇ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 5:48 IST
Last Updated 24 ಏಪ್ರಿಲ್ 2019, 5:48 IST
ಡಾ. ರಾಜ್‌ಕುಮಾರ್
ಡಾ. ರಾಜ್‌ಕುಮಾರ್   

ಬೆಂಗಳೂರು: ಚಿತ್ರನಟ ದಿವಂಗತ ಡಾ. ರಾಜ್‌ಕುಮಾರ್ ಅವರ 91ನೇ ಜನ್ಮದಿನಾಚರಣೆ ಬುಧವಾರ (ಏ 24)ರಂದು ನಡೆಯಲಿದೆ.

ಎಂಥದೇ ಪಾತ್ರವಾದರೂ ಅದಕ್ಕೆ ಜೀವ ತುಂಬುವಂತಹ ಅದ್ಭುತ ಅಭಿನಯ, ತಮ್ಮ ಸರಳತೆ–ಸಜ್ಜನಿಕೆಯಿಂದ ಕನ್ನಡಿಗರ ಮನಗೆದ್ದ ಡಾ. ರಾಜ್‌, ಗೋಕಾಕ್ ಚಳವಳಿಯಲ್ಲಿ ಭಾಗಿಯಾಗುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿದವರು.

2006 ಏಪ್ರಿಲ್ 12ರಂದು ಅವರು ನಿಧನರಾಗಿದ್ದು, ಆ ಬಳಿಕ ಅವರ ಜನ್ಮ ದಿನಾಚರಣೆಯನ್ನು ಅಭಿಮಾನಿಗಳು ಸವಿನೆನಪಿನಿಂದ ಆಚರಿಸುತ್ತಾ ಬರುತ್ತಿದ್ದಾರೆ. ಬೆಂಗಳೂರು ಸೇರಿದಂತೆ ನಾಡಿನ ವಿವಿಧೆಡೆ ಇರುವ ರಾಜ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿರುವ ಅಭಿಮಾನಿಗಳು ಅವರಿಗೆ ಗೌರವ ಸಲ್ಲಿಸಲಿದ್ದಾರೆ.

ADVERTISEMENT

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5ಗಂಟೆಗೆ ರಾಜ್ ಜನ್ಮ ದಿನಾಚರಣೆ ಹಮ್ಮಿಕೊಂಡಿದೆ. ಕವಿ ಕೆ.ಎಸ್‌. ನಿಸಾರ್ ಅಹಮದ್‌, ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ರಾಜ್‌ ಪುತ್ರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್ ರಾಜ್‌ಕುಮಾರ್‌ ಭಾಗವಹಿಸಲಿದ್ದಾರೆ.

ಚಿತ್ರ ನಿರ್ದೇಶಕ ಯೋಗರಾಜ್ ಭಟ್‌ ಸಂಯೋಜನೆಯಲ್ಲಿ ರಾಜ್‌ಕುಮಾರ್ ಅವರು ಹಾಡಿದ್ದ ಚಿತ್ರಗೀತೆಗಳ ಗಾಯನ ಕೂಡ ನಡೆಯಲಿದೆ.

ನಗರದ ವಿವಿಧ ಸಂಸ್ಥೆಗಳು ಡಾ. ರಾಜ್‌ ಧ್ವನಿ ಗಾಯನ ಸ್ಪರ್ಧೆ, ಡಾ. ರಾಜ್‌ ಗೀತಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಿವೆ. ಮಲ್ಲೇಶ್ವರದ ಗೋಕಾಕ್‌ ಚಳವಳಿ ವೃತ್ತದಲ್ಲೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.