ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ಸಹಯೋಗದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು ಫೆ.1ರಿಂದ ಫೆ.8ರವರೆಗೆ ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿ ಭಾರತ ರಂಗ ಮಹೋತ್ಸವ ಹಮ್ಮಿಕೊಂಡಿದೆ.
ಎಂಟು ದಿನಗಳು ನಡೆಯುವ ಈ ರಂಗ ಮಹೋತ್ಸವಕ್ಕೆ ಶನಿವಾರ ಸಂಜೆ 4.30ಕ್ಕೆ ಚಾಲನೆ ದೊರೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸಮಾರಂಭ ಉದ್ಘಾಟಿಸುತ್ತಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಂಗ ಹೊತ್ತಿಗೆ ಬಿಡುಗಡೆ ಮಾಡುತ್ತಾರೆ. ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಅವರಿಗೆ ಉತ್ಸವ ಗೌರವ ಸಲ್ಲಿಸಲಾಗುತ್ತದೆ. ಬಳಿಕ ಶ್ರವಣ ಹೆಗ್ಗೋಡು ನಿರ್ದೇಶನದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್ ಕಲಾವಿದರು ‘ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್’ ಕನ್ನಡ ನಾಟಕ ಪ್ರದರ್ಶಿಸುತ್ತಾರೆ ಎಂದು ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ತಿಳಿಸಿದ್ದಾರೆ.
ಮಹೋತ್ಸವದಲ್ಲಿ ರಷ್ಯಾ ಹಾಗೂ ಶ್ರೀಲಂಕಾ ದೇಶದ ತಲಾ ಒಂದು ನಾಟಕಗಳು, ಹಿಂದಿ ಭಾಷೆಯ ಮೂರು, ತೆಲುಗು ಭಾಷೆಯ ಒಂದು ಹಾಗೂ ಕನ್ನಡದ ಎರಡು ನಾಟಕಗಳು ಪ್ರದರ್ಶನ ಕಾಣಲಿವೆ. ಮೇಕಪ್, ಬೊಂಬೆಯಾಟಕ್ಕಾಗಿಯೇ 15 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಅಕಾಡೆಮಿಗಳ ಪುಸ್ತಕ ಪ್ರದರ್ಶನವೂ ಇರಲಿದೆ. ಜಾನಪದ ಕಲೆ, ನೃತ್ಯ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
18 ವರ್ಷಗಳ ನಂತರ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ನಾಟಕ ಮಹೋತ್ಸವ ಆಯೋಜಿಸಲಾಗುತ್ತಿದೆ. ಪ್ರತಿ ದಿನ ಸಂಜೆ 5 ಗಂಟೆಯಿಂದ ನಾಟಕ ಪ್ರದರ್ಶನ ಕಾಣಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತ ರಂಗ ಮಹೋತ್ಸವದ ಭಾಗವಾಗಿ ಭಾನುವಾರ (ಫೆ.2) ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಕಲಾಗ್ರಾಮದಲ್ಲಿ ರಂಗ ಪರಿಷೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ರಂಗ ತಂಡಗಳು ತಮ್ಮ ನಾಟಕಗಳ ಪರಿಕರಗಳು ರಂಗ ಸಜ್ಜಿಕೆ ವೇಷಭೂಷಣಗಳನ್ನು ಪ್ರದರ್ಶಿಸಲಿವೆ. ನಾಟಕಗಳ ರಂಗ ತುಣುಕು ರಂಗಗೀತೆ ಮೊದಲಾದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿವೆ ಎಂದು ಕೆ.ವಿ. ನಾಗರಾಜಮೂರ್ತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.