ADVERTISEMENT

13 ಗ್ರಾಮಗಳಿಗೆ ‘ಕಾವೇರಿ’ ಪೂರೈಕೆಗೆ ಸಜ್ಜು

110 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಯಡಿ ಈವರೆಗೆ 38 ಹಳ್ಳಿಗಳಿಗೆ ನೀರು

ಗುರು ಪಿ.ಎಸ್‌
Published 16 ಜೂನ್ 2020, 19:45 IST
Last Updated 16 ಜೂನ್ 2020, 19:45 IST
ಬೆಳ್ಳಂದೂರಿನಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ 
ಬೆಳ್ಳಂದೂರಿನಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ    

ಬೆಂಗಳೂರು: ಬಿಬಿಎಂಪಿ ಹೊರವಲಯದ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆಯಡಿ 13 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಜಲಮಂಡಳಿ ಸಜ್ಜಾಗಿದೆ.

ಈ ಯೋಜನೆಯಡಿ ಈಗಾಗಲೇ 38 ಹಳ್ಳಿಗಳಿಗೆ ಕಾವೇರಿ ನೀರು ಸೌಲಭ್ಯ ಒದಗಿಸಲಾಗುತ್ತಿದೆ. ಸರಿಯಾಗಿ ಒಂದು ವರ್ಷದ ನಂತರ ಕೊಳವೆ ಮಾರ್ಗ ಕಾಮಗಾರಿ ಪೂರ್ಣಗೊಳಿಸಿರುವ ಮಂಡಳಿಯು, ಮತ್ತೆ 13 ಹಳ್ಳಿಗಳಿಗೆ ನೀರು ಪೂರೈಸಲು ನಿರ್ಧರಿಸಿದೆ.

‘ನೀರು ಪೂರೈಸುವ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ಮುಗಿದಂತೆ ಒಂದೊಂದೇ ಹಳ್ಳಿಗಳಿಗೆ ಕಾವೇರಿ ನೀರಿನ
ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದ್ದೇವೆ. 2018ರ ಜನವರಿಯಲ್ಲಿ 9, ಜೂನ್‌ನಲ್ಲಿ 6, ನವೆಂಬರ್‌ನಲ್ಲಿ 12 ಹಾಗೂ 2019ರ ಮೇ ತಿಂಗಳಲ್ಲಿ 12 ಗ್ರಾಮಗಳು ಸೇರಿದಂತೆ ಒಟ್ಟು 38 ಹಳ್ಳಿಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು’ ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್‌ ಬಿ. ಶಿವಪ್ರಸಾದ್‌ (ಯೋಜನೆ) ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇನ್ನೂ 20 ಹಳ್ಳಿಗಳಿಗೆ ನೀರು ಪೂರೈಸುವ ಕೆಲಸ ಅಂತಿಮ ಹಂತದಲ್ಲಿದೆ’ ಎಂದೂ ಅವರು ಮಾಹಿತಿ ನೀಡಿದರು.

₹2,500 ಶುಲ್ಕ:‘ಆಯಾ ಕಟ್ಟಡಹೊಂದಿರುವ ವಿಸ್ತೀರ್ಣ, ಮಹಡಿಗಳ ಸಂಖ್ಯೆ ಆಧರಿಸಿದ ಶುಲ್ಕ ನಿರ್ಧರಿಸಲಾಗುತ್ತದೆ. ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳಲು ₹2,500 ಶುಲ್ಕ ಪಾವತಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು’ ಎಂದು ಅವರು ತಿಳಿಸಿದರು.

ಶೇ 50ರಷ್ಟು ಪೂರ್ಣ: ಈ ಹಳ್ಳಿಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕೆಲಸ ಇನ್ನೂ ನಡೆಯುತ್ತಿದೆ. ಅಂದಾಜು ₹1,500 ಕೋಟಿ ಮೊತ್ತದ ಯೋಜನೆ ಇದು.ಈ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರಿನ ಕೊಳವೆಗಳನ್ನು 2019ರ ಮೇ ಒಳಗೆ ಅಳವಡಿಸುವುದಾಗಿ ಜಲಮಂಡಳಿಯು ಹೇಳಿತ್ತು. ಆದರೆ, ಶೇ 50ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ.

ನೀರಿನ ಸೌಲಭ್ಯಕ್ಕಾಗಿ ಇಲ್ಲಿ ಸಂಪರ್ಕಿಸಿ

13 ಹಳ್ಳಿಗಳ ಜನ ಕಾವೇರಿ ನೀರು ಸಂಪರ್ಕ ಪಡೆಯಲು ಸಂಪರ್ಕಿಸಬೇಕಾದ ಸಂಖ್ಯೆಯನ್ನು ಜಲಮಂಡಳಿ ಪ್ರಕಟಿಸಿದೆ.

ದೊಡ್ಡಬೆಟ್ಟಹಳ್ಳಿ (9845444139), ಉಳ್ಳಾಲು (9740984166), ಆಲಹಳ್ಳಿ, ಅಂಜನಾಪುರ, ಚಿಕ್ಕತೊಗೂರು, ದೊಡ್ಡತೊಗೂರು, ಬಸಾಪುರ (9845444121), ಬೆಳ್ಳಂದೂರು ಕೈಕೊಂಡ್ರಹಳ್ಳಿ (9845444054), ಬಿ. ಲಿಂಗಧೀರನಹಳ್ಳಿ, ಹೊಸಹಳ್ಳಿ (9740984165), ವಡ್ಡರಪಾಳ್ಯ ಮತ್ತು ಗುಬ್ಬಲಾಳು ಗ್ರಾಮಸ್ಥರು (9945518971) ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಸೌಲಭ್ಯ ಪಡೆದುಕೊಳ್ಳಬಹುದು.

ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ, www.bwssb.gov.in ವೆಬ್‌ಸೈಟ್‌ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.