ಚನ್ನಪಟ್ಟಣ: ಬೆಂಗಳೂರಿನಿಂದ ಓಲಾ ಕ್ಯಾಬ್ ಬಾಡಿಗೆಗೆ ಪಡೆದು ಶನಿವಾರ ಚನ್ನಪಟ್ಟಣಕ್ಕೆ ಕರೆತಂದು ಕ್ಯಾಬ್ ಚಾಲಕನನ್ನು ಬೆದರಿಸಿ ₹20 ಸಾವಿರ ದರೋಡೆ ಮಾಡಲಾಗಿದೆ.
ಶುಕ್ರವಾರ ರಾತ್ರಿ ಬೆಂಗಳೂರಿನ ಆಡುಗೋಡಿಯಿಂದ ದೊಮ್ಮಸಂದ್ರಕ್ಕೆ ನಾಲ್ಕು ಮಂದಿ ದರೋಡೆಕೋರರು ಕ್ಯಾಬ್ ಬುಕ್ ಮಾಡಿಕೊಂಡು ಹೊರಟಿದ್ದಾರೆ.
ಹೊರಟ ನಂತರ ಚಾಲಕ ಸೋಮಶೇಖರ್ ಅವರನ್ನು ಚಾಕು ತೋರಿಸಿ ಬೆದರಿಸಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಸುತ್ತಾಡಿಸಿದ್ದಾರೆ. ನಂತರ ಆತನ ಬಳಿಯಿದ್ದ ಹಣವನ್ನು ಲಪಟಾಯಿಸಿದ್ದಲ್ಲದೆ ಎಟಿಎಂ ಕಾರ್ಡ್ ಕಿತ್ತುಕೊಂಡು ₹20 ಸಾವಿರ ಡ್ರಾ ಮಾಡಿಸಿ ಪಡೆದುದಾಗಿ ತಿಳಿದುಬಂದಿದೆ. ರಾತ್ರಿಪೂರ್ತಿ ಸುತ್ತಾಡಿಸಿ ಶನಿವಾರ ಬೆಳಿಗ್ಗೆ ಚನ್ನಪಟ್ಟಣಕ್ಕೆ ಕರೆತಂದಿದ್ದಾರೆ.
ಚನ್ನಪಟ್ಟಣದಲ್ಲಿ ವಸತಿ ಗೃಹದಲ್ಲಿ ಕೊಠಡಿ ಬಾಡಿಗೆ ಪಡೆದು ಕೊಠಡಿಗೆ ಚಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ಆಗ ಚಾಲಕ ಸೋಮಶೇಖರ್ ಕಿಟಿಕಿಯಿಂದ ಹಾರಿ ತಪ್ಪಿಸಿಕೊಂಡಿದ್ದಾರೆ. ನಾಲ್ವರು ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಾಲಕ ಸೋಮಶೇಖರ್ ಪಟ್ಟಣದ ಪುರ ಪೊಲೀಸ್ ಠಾಣೆಗೆ ಹಾಜರಾಗಿ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಡುಗೋಡಿ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.