ADVERTISEMENT

ಚಾಲನಾ ಪರವಾನಗಿ: ಕಟ್ಟುನಿಟ್ಟಿನ ನಿಮಯ ಪಾಲನೆಗೆ ಹೈಕೋರ್ಟ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 16:39 IST
Last Updated 15 ನವೆಂಬರ್ 2021, 16:39 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ವಾಹನ ಚಾಲನಾ ಪರವಾನಿಗೆ ನೀಡುವ ಮುನ್ನ ಅಗತ್ಯ ಪರೀಕ್ಷೆ ನಡೆಸುವ ಸಂದರ್ಭದಲ್ಲಿ, ‘ಮೋಟಾರು ವಾಹನ ಕಾಯ್ದೆ-1989ರ ಕಲಂ 15 (2) ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಚಾಲನಾ ಪರವಾನಿಗೆ ನೀಡುವ ಸಂಸ್ಥೆಗಳಿಗೆ ಹೈಕೋರ್ಟ್ ಕಟ್ಟುನಿಟ್ಟಿನ ತಾಕೀತು ಮಾಡಿದೆ.

ಈ ಸಂಬಂಧ ಎಸ್. ಗೌರಿಶಂಕರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಎಸ್.ಗೌರಿಶಂಕರ್ ಖುದ್ದು ವಾದ ಮಂಡಿಸಿ,‘ಒಂದು ಕೇಂದ್ರದಲ್ಲಿ ದಿನವೊಂದಕ್ಕೆ 200 ಮಂದಿಗೆ ಪರೀಕ್ಷೆ ನಡೆಸಲಾಗುತ್ತದೆ. ಇದು ಪ್ರಾಯೋಗಿಕವಾಗಿ ಸಾಧುವಲ್ಲ. ಹೀಗಾಗಿ ರಸ್ತೆ ಅಪಘಾತ ಹೆಚ್ಚಾಗುತ್ತಿವೆ. ಇದು ಜನರ ಜೀವ ಮತ್ತು ಸುರಕ್ಷತೆಯ ವಿಚಾರವಾಗಿದ್ದು, ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು’ ಎಂದು ಕೋರಿದರು.

ADVERTISEMENT

ಸರ್ಕಾರಿ ವಕೀಲರು, ‘ಚಾಲನಾ ಪರವಾನಿಗೆ ನೀಡುವ ಮೊದಲು ನಡೆಸಲಾಗುವ ಪರೀಕ್ಷೆಗಳನ್ನು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಲಾಗುತ್ತಿದೆ. ಈ ಬಗ್ಗೆ 2021ರ. ಆಗಸ್ಟ್ 13ರಂದು ಸಂಬಂಧಪಟ್ಟ ಎಲ್ಲರಿಗೂ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಇದನ್ನು ಪುರಸ್ಕರಿಸಿದ ನ್ಯಾಯಪೀಠ, ‘ಸಂಬಂಧಿಸಿದ ಪ್ರಾಧಿಕಾರಗಳು, ಮೋಟಾರು ವಾಹನ ಕಾಯ್ದೆಯ ಕಲಂ 15 (2)ರ ಅನ್ವಯ ನೋಂದಣಿ ಪುಸ್ತಕ ನಿರ್ವಹಿಸಬೇಕು’ ಎಂದು ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.