ADVERTISEMENT

ಪ್ರವಾಸಿಗರ ಸಂಖ್ಯೆ ಶೇ 70ರಷ್ಟು ಕುಸಿತ

ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ತಟ್ಟಿದ ಭೀತಿ; ದಿನಕ್ಕೆ 40 ಜನರಷ್ಟೇ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 21:25 IST
Last Updated 13 ಮಾರ್ಚ್ 2020, 21:25 IST
ಸಿ.ಟಿ.ರವಿ 
ಸಿ.ಟಿ.ರವಿ    

ಬೆಂಗಳೂರು: ಕೊರೊನಾ ವೈರಸ್ ಭೀತಿ ರಾಜ್ಯದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ನೀಡಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶ ಮತ್ತು ವಿದೇಶಿ ಪ್ರವಾಸಿಗರ ಸಂಖ್ಯೆ ಶೇ70ರಷ್ಟು ಕುಸಿದಿದೆ.

ಕಳೆದ ಸಾಲಿನ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ(ಜಿಎಸ್‌ಡಿಪಿ) ಪ್ರವಾಸೋದ್ಯಮ ಶೇ 14.8ರಷ್ಟು ಕೊಡುಗೆ ನೀಡಿದೆ. ಬೇಸಿಗೆಯಲ್ಲೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಗೆ ಕೋವಿಡ್‌ 19 ಅಡ್ಡಿಯಾಗಿದ್ದು, ಜಿಎಸ್‌ಡಿಪಿ ಮೇಲೆ ಇದರ ಪರಿಣಾಮ ಬೀರಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಂದಾಜಿಸಿದೆ.

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ(ಕೆಎಸ್‌ಟಿಡಿಸಿ) ಹೋಟೆಲ್‌ಗಳು ಖಾಲಿ ಹೊಡೆಯುತ್ತಿವೆ. ಮೈಸೂರು, ಹಂಪಿ, ಶ್ರೀರಂಗಪಟ್ಟಣ, ಮಡಿಕೇರಿ, ಬಿ.ಆರ್. ಹಿಲ್ಸ್‌, ಬೆಂಗಳೂರಿನ ನಂದಿಬೆಟ್ಟ ಸೇರಿ ರಾಜ್ಯದಲ್ಲಿರುವ ಕೆಎಸ್‌ಟಿಡಿಸಿಯ ಬಹುತೇಕ ಹೋಟೆಲ್‌ಗಳಲ್ಲಿ ಕೊಠಡಿ ಕಾಯ್ದಿರಿಸುವವರ ಸಂಖ್ಯೆ ಕಡಿಮೆಯಾಗಿದೆ.

ADVERTISEMENT

ಕೆಎಸ್‌ಟಿಡಿಸಿ ಬೆಂಗಳೂರು ಮತ್ತು ಮೈಸೂರಿನಿಂದ ಆರಂಭಿಸಿರುವ ಪ್ಯಾಕೇಜ್ ಪ್ರವಾಸಗಳ ಮೇಲೂ ಹೊಡೆತ ಬಿದ್ದಿದೆ. ಪಾರಂಪರಿಕ ಪ್ರವಾಸ, ತೀರ್ಥಯಾತ್ರೆ, ನಗರ, ನಿಸರ್ಗ, ಬೀಚ್, ಕಾರ್ಪೊರೇಟ್ ಪ್ಯಾಕೇಜ್‌ ಪ್ರವಾಸಗಳಿಗೆ ಜನ ಆಸಕ್ತಿ ತೋರುತ್ತಿಲ್ಲ.

ತಿರುಪತಿಗೆ ಪ್ರತಿನಿತ್ಯ ಕೆಎಸ್‌ಟಿಡಿಸಿ ನಾಲ್ಕು ಅಥವಾ ಐದು ಬಸ್‌ಗಳು ಹೋಗುತ್ತಿದ್ದವು. ಸರಾಸರಿ 200 ಪ್ರಯಾಣಿಕರು ಕೆಎಸ್‌ಟಿಡಿಸಿ ಬಸ್‌ನಲ್ಲಿ ತಿರುಪತಿಗೆ ಹೋಗಿ ಬರುತ್ತಿದ್ದರು. ಈಗ ತಿರುಪತಿಗೆ ಒಂದೇ ಒಂದು ಬಸ್ ಹೋಗುತ್ತಿದೆ. ಆ ಬಸ್‌ನಲ್ಲೂ 35ರಿಂದ 40 ಜನ ಮಾತ್ರ ಪ್ರಯಾಣ ಮಾಡುತ್ತಿದ್ದಾರೆ ಎಂದು ಕೆಎಸ್‌ಟಿಡಿಸಿ ಅಧಿಕಾರಿಗಳು ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುವ ಸಂದರ್ಭವಾಗಿರುವ ಕಾರಣ ಮಾರ್ಚ್‌ನಲ್ಲಿ ಸಾಮಾನ್ಯವಾಗಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುತ್ತದೆ. ಏಪ್ರಿಲ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವ ಆತಂಕ ಇದೆ’ ಎಂದು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಹೇಳಿದರು.

*
ಆತಿಥ್ಯ ವಲಯಕ್ಕೆ ಕೋವಿಡ್ –ಭಾರಿ ಪೆಟ್ಟು ನೀಡಿದೆ. ಈ ವಲಯದ ವಹಿವಾಟು ಶೇ 50ರಷ್ಟು ಕಡಿಮೆಯಾಗಿದೆ.
-ಸಿ.ಟಿ. ರವಿ,ಪ್ರವಾಸೋದ್ಯಮ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.