ADVERTISEMENT

ಡ್ರಗ್ಸ್ ಪತ್ತೆಗೆ ಮಹಾರಾಷ್ಟ್ರ ಪೊಲೀಸರು ಬರಬೇಕಾ? ಸಿದ್ದರಾಮಯ್ಯ ಅಸಮಾಧಾನ

ರಾಜ್ಯ ಪೊಲೀಸರ ಕಾರ್ಯವೈಖರಿ: ಅಸಮಾಧಾನ ಹೊರಹಾಕಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 16:05 IST
Last Updated 17 ಜನವರಿ 2026, 16:05 IST
ಬೆಂಗಳೂರಿನಲ್ಲಿ ಇರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶನಿವಾರ ನಡೆದ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು 
ಬೆಂಗಳೂರಿನಲ್ಲಿ ಇರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶನಿವಾರ ನಡೆದ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು    

ಬೆಂಗಳೂರು: ‘ಮಹಾರಾಷ್ಟ್ರದ ಪೊಲೀಸರು ಬೆಂಗಳೂರು ಹಾಗೂ ಮೈಸೂರು ನಗರಕ್ಕೆ ಬಂದು ಡ್ರಗ್ಸ್ ಕಾರ್ಖಾನೆಗಳನ್ನು ಪತ್ತೆ ಹಚ್ಚಲು ಸಾಧ್ಯ ಆಗಿದ್ದರೆ, ರಾಜ್ಯದ ಪೊಲೀಸರಿಗೇಕೆ ಆ ರೀತಿಯ ಕಾರ್ಯಾಚರಣೆ ಸಾಧ್ಯವಾಗಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಹಿರಿಯ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ಅವರು ಈ ರೀತಿ ತರಾಟೆಗೆ ತೆಗೆದುಕೊಂಡರು.

‘ರಾಜ್ಯದ ಪೊಲೀಸರು ಡ್ರಗ್ಸ್ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ತಹಶೀಲ್ದಾರ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ, ಆ ತಾಲ್ಲೂಕಿನಲ್ಲಿ ಜನರು ನೆಮ್ಮದಿಯಿಂದ ಇರಲು ಸಾಧ್ಯವಿದೆ. ಜಿಲ್ಲಾಧಿಕಾರಿ, ಎಸ್‌ಪಿ ಮತ್ತು ಸಿಇಒ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಆ ಜಿಲ್ಲೆಯ ಜನರು ನೆಮ್ಮದಿಯಿಂದ ಇರುತ್ತಾರೆ. ಆದರೆ, ಕೆಲವು ಪೊಲೀಸ್ ಠಾಣೆಗಳಲ್ಲಿ ಕೆಲವು ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣಕ್ಕೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಬೇಸರ ಹೊರಹಾಕಿದರು.

‘ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯನ್ನು ಖಾತ್ರಿಪಡಿಸುವಲ್ಲಿ ಪೊಲೀಸರ ಪಾತ್ರ ಮುಖ್ಯವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ಕಳೆದ ವರ್ಷ ಶೇ 3ರಷ್ಟಿತ್ತು. ಈಗ ಶೇ 12ಕ್ಕೆ ಸುಧಾರಿಸಿದೆ. ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಇನ್ನಷ್ಟು ಕಾಳಜಿಯಿಂದ ಕೆಲಸ ಮಾಡಬೇಕು’ ಎಂದು ಸೂಚನೆ ನೀಡಿದರು.

‘ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಅಭಿವೃದ್ಧಿ ಪರಸ್ಪರ ಪೂರಕವಾಗಿವೆ. ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಹೂಡಿಕೆ ಹೆಚ್ಚಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ’ ಎಂದು ಹೇಳಿದರು.

ರಾಜೀವ್ ಗೌಡ ಬಂಧನಕ್ಕೆ ಸೂಚನೆ: ಶಿಡ್ಲಘಟ್ಟದ ಪೌರಾಯುಕ್ತರಿಗೆ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಗೌಡ ಅವರನ್ನು ಬಂಧನಕ್ಕೆ ಸೂಚಿಸಲಾಗಿದೆ. ಅವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ತಂಡ ರಚಿಸಲಾಗಿದೆ. ಯಾವುದೇ ಪಕ್ಷದವರಾಗಲಿ, ಕಾನೂನಿಗಿಂತ ಯಾರೂ ಮೇಲಲ್ಲ ಎಂದು ಹೇಳಿದರು.

ಗೃಹ ಸಚಿವ ಜಿ.ಪರಮೇಶ್ವರ ಮಾತನಾಡಿ, ಅಪರಾಧ ಪ್ರಕರಣಗಳ ತನಿಖೆಯಲ್ಲಿ ಪ್ರಗತಿ ಸಾಧಿಸಲು ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ತಜ್ಞರಿಂದ ವಿಷಯ ಮಂಡನೆ ಆಯೋಜಿಸಲಾಗಿದೆ. ಸಿಬಿಐನ ಸಹಾಯಕ ನಿರ್ದೇಶಕ ಕೃಷ್ಣ ಅವರು ರಾಜ್ಯದ ಪೊಲೀಸ್‌ ಅಧಿಕಾರಿಗಳ ಜತೆಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದರು.

‘ಸೈಬರ್ ಕ್ರೈಂ ಹಾವಳಿ ಮತ್ತು ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವ ಉದ್ದೇಶದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಪ್ರತ್ಯೇಕ ವಿಭಾಗ  ಸ್ಥಾಪಿಸಲಾಗಿದೆ. ಈ ವಿಭಾಗಗಳು ಸರ್ಕಾರದ ನಿರೀಕ್ಷೆಯ ಮಟ್ಟಕ್ಕೆ ಕೆಲಸ‌ ಮಾಡುತ್ತಿಲ್ಲ. ಇದನ್ನು ನಿರ್ಲಕ್ಷಿಸದೇ ಪರಿಣಾಮಕಾರಿ ಆಗಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಉಪಸ್ಥಿತರಿದ್ದರು.

ರಾಯಚೂರಿನ ಕವಿತಾಳ ಪೊಲೀಸ್ ಠಾಣೆಯು ದೇಶದಲ್ಲಿಯೇ ಉತ್ತಮ ಪೊಲೀಸ್‌ ಠಾಣೆಗಳ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದ್ದು, ಠಾಣೆಯ ಇನ್‌ಸ್ಪೆಕ್ಟರ್‌ಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು.

ಬೆಂಗಳೂರು ಸೈಬರ್ ಕ್ರೈಂ ಅಡ್ಡೆಯಾಗುವುದಕ್ಕೆ ಆಸ್ಪದ ನೀಡಬಾರದು. ಪೊಲೀಸ್ ಇಲಾಖೆಯು ತಾಂತ್ರಿಕವಾಗಿ ಮತ್ತಷ್ಟು ಬಲಪಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವು ಎಲ್ಲ ರೀತಿಯ ಸಹಕಾರ ನೀಡಲಿದೆ
ಜಿ. ಪರಮೇಶ್ವರ ಗೃಹ ಸಚಿವ

‘88 ಕೃತ್ಯಗಳಲ್ಲಿ ಪೊಲೀಸರೇ ಶಾಮೀಲು

’ ‘88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗಿರುವುದು ಪತ್ತೆಯಾಗಿದೆ. ಪೊಲೀಸರು ಇರುವುದು ಜನರ ರಕ್ಷಣೆಗಾಗಿ. ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ. ಮುಂದೆ ಅಪರಾಧ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಪೊಲೀಸ್ ಸಿಬ್ಬಂದಿ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಕಾದಿದೆ’ ಎಂದು ಸಿದ್ದರಾಮಯ್ಯ ಎಚ್ಚರಿಸಿದರು. ‘ಪೊಲೀಸ್ ಇಲಾಖೆ ಕೆಲವು ಠಾಣೆಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿ ಆಗುತ್ತಿರುವುದರಿಂದ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ’ ಎಂದು ಹೇಳಿದರು.  

ಮುಖ್ಯಮಂತ್ರಿ ಸೂಚನೆಗಳು...

* ದಕ್ಷತೆ ಹಾಗೂ ಎಚ್ಚರಿಕೆಯಿಂದ ಪೊಲೀಸರು ಕೆಲಸ ಮಾಡಿದರೆ ಮಾದಕ ವಸ್ತು ಮುಕ್ತ ರಾಜ್ಯವಾಗಿಸಲು ಸಾಧ್ಯವಿದೆ

* ಸೈಬರ್ ವಂಚಕರ ಪತ್ತೆಗೆ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು

* ಅಪರಾಧ ಪ್ರಕರಣಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ ಉತ್ತಮವಾಗಿ ಕೆಲಸ ಮಾಡಿದರೆ ಅಪರಾಧ ಪ್ರಕರಣಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ

* ಪಿಎಸ್‌ಐ ಇನ್‌ಸ್ಪೆಕ್ಟರ್‌ ಡಿವೈಎಸ್‌ಪಿಗಳ ಮೇಲೆ ಹಿರಿಯ ಅಧಿಕಾರಿಗಳು ನಿಗಾ ಇಡಬೇಕು

* ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾನ್‌ ಮೈಕೆಲ್ ಕುನ್ಹ ಸಮಿತಿ ಶಿಫಾರಸು ಪಾಲಿಸಲು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ. ಅಲ್ಪಾವಧಿ ಶಿಫಾರಸುಗಳನ್ನು ತಕ್ಷಣವೇ ಜಾರಿಗೆ ತರಬೇಕು. ದೀರ್ಘಾವಧಿಯಲ್ಲಿ ಉಳಿದ ಶಿಫಾರಸು ಪಾಲಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.