ಬೆಂಗಳೂರು: ವೈದ್ಯಕೀಯ ವೀಸಾದಡಿ ನಗರಕ್ಕೆ ಬಂದು ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ನೈಜೀರಿಯಾದ ಮಹಿಳೆ ಸೇರಿ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿ, ₹2.15 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾದ ಒಕ್ಕಿ ಚೆನ್ಯಾಡು ಸ್ಯಾಮೂಯಲ್, ಕ್ವಿಕಿರಿಜಾ ಟೋಪಿಸ್ಟ್ ಎಂಬುವರನ್ನು ಬಂಧಿಸಿ, 490 ಗ್ರಾಂ ಎಂಡಿಎ ಕ್ರಿಸ್ಟಲ್, 43 ಗ್ರಾಂ ಕೊಕೇನ್, ತೂಕದ ಯಂತ್ರ, ಮೊಬೈಲ್ ಫೋನ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ನಾಪತ್ತೆಯಾಗಿರುವ ಮತ್ತೊಬ್ಬ ಪೆಡ್ಲರ್ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ 1ನೇ ಹಂತದ ಮಹಾಲಕ್ಷ್ಮೀ ಲೇಔಟ್‌ನ ಖಾಲಿ ಜಾಗದಲ್ಲಿ ವಿದೇಶಿ ಪ್ರಜೆ ಬೈಕ್‌ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಬಾತ್ಮೀದಾರರ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ, ಒಕ್ಕಿ ಚೆನ್ಯಾಡು ಸ್ಯಾಮೂಯಲ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು.
‘ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವೈದ್ಯಕೀಯ ವೀಸಾದಡಿ ನಗರಕ್ಕೆ ಬಂದು ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದು, ಕೃತ್ಯದಲ್ಲಿ ಮತ್ತೊಬ್ಬ ವಿದೇಶಿ ಮಹಿಳೆ ಮತ್ತು ವ್ಯಕ್ತಿ ಭಾಗಿಯಾಗಿರುವ ಬಗ್ಗೆ ವಿಚಾರಣೆ ವೇಳೆ ತಿಳಿಸಿದ್ದಾರೆ’ ಎಂದು ಹೇಳಿದರು.
ಆರೋಪಿ ನೀಡಿದ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿದ ಪೊಲೀಸರು, ಈತನಿಗೆ ಸಹಕರಿಸಿದ ವಿದೇಶಿ ಮಹಿಳೆಯನ್ನು ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಟೆಕ್ ಸಿಟಿ ಲೇಔಟ್‌ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆಯೂ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಐ.ಟಿ ಉದ್ಯೋಗಿಗಳು ಮತ್ತು ಸ್ಥಳೀಯರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದುದ್ದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ತಲೆಮರೆಸಿಕೊಂಡಿರುವ ಮತ್ತೊಬ್ಬ ವಿದೇಶಿ ಪ್ರಜೆಗಾಗಿ ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ತನಿಖೆ ವೇಳೆ ನಕಲಿ ಪಾಸ್‌ಪೋರ್ಟ್ ಹೊಂದಿರುವುದು ಪತ್ತೆಯಾಗಿದೆ.
‘ನಗರದಲ್ಲಿ ನಿರಂತರವಾಗಿ ಮಾದಕ ವಸ್ತುಗಳು ಪತ್ತೆಯಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಡ್ರಗ್ಸ್ ಮೂಲವನ್ನು ಪತ್ತೆ ಮಾಡಿ, ಮುಂದೆ ಈ ರೀತಿಯಾಗದಂತೆ ಕ್ರಮ ಕೈಗೊಳ್ಳಲು ಜಂಟಿ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.