ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಬಿಬಿಎಂಪಿಯು ನಗರದ ಎಲ್ಲಾ ವಾರ್ಡ್‌ಗಳ ಪ್ರಮುಖ ಸ್ಥಳಗಳಲ್ಲಿ ಸೋಂಕು ನಿವಾರಕ ದ್ರಾವಣ (ಸೋಡಿಯಂ ಹೆೃಪೊ ಕ್ಲೋರೈಡ್) ಸಿಂಪಡಣೆ ಮಾಡಲಿದೆ.
ಈ ಕಾರ್ಯಕ್ಕೆ ಮೇಯರ್ ಎಂ.ಗೌತಮ್ ಕುಮಾರ್ ಪಾಲಿಕೆ ಕೇಂದ್ರ ಕಚೇರಿ ಬಳಿ ಮಂಗಳವಾರ ಚಾಲನೆ ನೀಡಿದರು.‘ಕೊರೊನಾ ಸೋಂಕಿತರ ಮನೆಗಳ ಸುತ್ತಮುತ್ತ ಹಾಗೂ ಸೋಂಕು ಹರಡುವ ಸಾಧ್ಯತೆ ಇರುವ ಪ್ರಮುಖ ಸ್ಥಳಗಳನ್ನು ಗುರುತಿಸಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಿದ್ದೇವೆ. ಇದಕ್ಕಾಗಿ ಜೆಟ್ಟಿಂಗ್ ಯಂತ್ರ ಹಾಗೂ ಟ್ಯಾಂಕರ್‌ಗಳನ್ನು ಬಳಸುತ್ತೇವೆ. ಅಗತ್ಯ ಇರುವ ಕಡೆ ಡ್ರೋನ್‌ಗಳನ್ನೂ ಬಳಸಲಿದ್ದೇವೆ’ ಎಂದು ಪಾಲಿಕೆಯ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮಾರುಕಟ್ಟೆ, ಬಸ್ ನಿಲ್ದಾಣ, ಆಸ್ಪತ್ರೆ ಮುಂತಾದ ಕಡೆ ಆದ್ಯತೆ ಮೇರೆಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗುವುದು. ಅಗತ್ಯ ಬಿದ್ದರೆ ಕೊಳೆಗೇರಿಗಳಲ್ಲಿ ಕೂಡಾ ಸಿಂಪಡಣೆ ಮಾಡುತ್ತೇವೆ. ಜನವಸತಿ ಪ್ರದೇಶಗಳಲ್ಲಿ ಸಿಂಪಡಿಸುವುದಿಲ್ಲ. ಮನೆಯ ಒಳಗೂ ನಾವು ಸಿಂಪಡಣೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಔಷಧ ಸಿಂಪಡಣೆ ನಡೆಯುತ್ತಿರುವಾಗ ಆ ಪ್ರದೇಶದಲ್ಲಿ ಜನ ಓಡಾಡದಿದ್ದರೆ ಸಾಕು. ಇದಕ್ಕಾಗಿ ವಿಶೇಷ ಕ್ರಮವನ್ನು ಕೈಗೊಳ್ಳಬೇಕಾಗಿಲ್ಲ. ಲಾಕ್ ಡೌನ್ ಇರುವ ಅಷ್ಟೂ ದಿನವೂ ಜನರು ಆದಷ್ಟು ಮನೆಯ ಒಳಗಡೆಯೇ ಇದ್ದರೆ ಕೊರೊನಾ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟ ಬಹುದು’ ಎಂದರು.
‘ಈಗಾಗಲೇ ಎಲ್ಲ ವಾರ್ಡ್‌ಗಳಲ್ಲೂ ಔಷಧ ಸಿಂಪಡಣೆಗೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಔಷಧವನ್ನು ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಲಾಗುತ್ತದೆ. ಎಷ್ಟು ಪ್ರಮಾಣದಲ್ಲಿ ಔಷಧ ಬೆರೆಸಬೇಕು ಎಂಬ ಬಗ್ಗೆ ಆಯಾ ವಾರ್ಡ್‌ಗೆ ನಿಯೋಜನೆಗೊಂಡ ಕಾರ್ಮಿಕರಿಗೆ ತರಬೇತಿ ನೀಡಲಿದ್ದೇವೆ’ ಎಂದು ಪಾಲಿಕೆ ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್ ಖಾನ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.