ADVERTISEMENT

ಕೋಡ್ ವರ್ಡ್ ಡ್ರಗ್ಸ್ ದಂಧೆ: 12 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 19:00 IST
Last Updated 26 ನವೆಂಬರ್ 2022, 19:00 IST

ಬೆಂಗಳೂರು: ಯಾರಿಗೂ ಅನುಮಾನ ಬಾರದಂತೆ ಕೋಡ್‌ ವರ್ಡ್‌ಗಳ ಮೂಲಕ ಡ್ರಗ್ಸ್ ದಂಧೆ ನಡೆಸುತ್ತಿದ್ದ ಜಾಲವನ್ನು ಅಮೃತಹಳ್ಳಿ ಪೊಲೀಸರು ಭೇದಿಸಿದ್ದು, ಮಹಿಳೆಯರು ಸೇರಿ 12 ಮಂದಿಯನ್ನು ಬಂಧಿಸಿದ್ದಾರೆ.

‘ಜಾಲದ ಮೂಲಕ ಡ್ರಗ್ಸ್ ಮಾರುತ್ತಿದ್ದ ಏಳು ಆರೋಪಿಗಳು ಹಾಗೂ ಅವರಿಂದ ಡ್ರಗ್ಸ್ ಖರೀದಿಸಿ ಸೇವಿಸುತ್ತಿದ್ದ ಐವರು ಗ್ರಾಹಕರನ್ನು ಬಂಧಿಸಲಾಗಿದೆ. 7 ಗ್ರಾಂ ಕೊಕೇನ್, 15 ಎಕ್ಸ್‌ಟೆಸ್ಸಿ ಮಾತ್ರೆಗಳು, 2 ದ್ವಿಚಕ್ರ ವಾಹನ ಹಾಗೂ 8 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹೊರವರ್ತುಲ ರಸ್ತೆಯ ಲುಂಬಿನಿ ಗಾರ್ಡನ್ ಬಳಿಯ ಸರ್ವೀಸ್‌ ರಸ್ತೆಯಲ್ಲಿ ನಿಂತಿದ್ದ ಇಬ್ಬರು ಆರೋಪಿಗಳು, ಗ್ರಾಹಕರಿಗೆ ಕೊಕೇನ್ ಮಾರುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಲಾಯಿತು. ಅವರಿಬ್ಬರು ಜಾಲದ ಉಳಿದ ಆರೋಪಿಗಳ ಹೆಸರು ಬಾಯ್ಬಿಟ್ಟರು.’

ADVERTISEMENT

‘ಆರೋಪಿಗಳು, ಡ್ರಗ್ಸ್‌ಗಳಿಗೆ ಅಝಾ ಹಾಗೂ ಇತರೆ ಕೋಡ್‌ ವರ್ಡ್‌ ಇಟ್ಟಿದ್ದರು. ಗ್ರಾಹಕರಿಗೂ ಕೋಡ್‌ ವರ್ಡ್ ನಿಗದಿ ಮಾಡಿದ್ದರು. ಅದರ ಮೂಲಕವೇ ಡ್ರಗ್ಸ್ ಪೂರೈಕೆ ಹಾಗೂ ಹಣದ ವಹಿವಾಟು ನಡೆಸುತ್ತಿದ್ದರು. ಇದರಿಂದಾಗಿ ಕೃತ್ಯದ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

ಜಾಮೀನು ಮೇಲೆ ಹೊರಬಂದು ಕೃತ್ಯ: ’ಮೂವರು ಆರೋಪಿಗಳು, ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದರು. ಇತರೆ ಆರೋಪಿಗಳ ಜೊತೆ ಸೇರಿ ವ್ಯವಸ್ಥಿತವಾಗಿ ಡ್ರಗ್ಸ್ ಮಾರುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.