ADVERTISEMENT

ಮೈದಾನದಲ್ಲಿ ಗಾಂಜಾ ಒಣಗಿಸುತ್ತಿದ್ದ ಆರೋಪಿಗಳು

ಮಾದಕ ವ್ಯಸನಿ ನೀಡಿದ ಮಾಹಿತಿಯಿಂದ ಸಿಕ್ಕಿಬಿದ್ದ ಪೆಡ್ಲರ್‌ಗಳು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 16:36 IST
Last Updated 27 ಸೆಪ್ಟೆಂಬರ್ 2020, 16:36 IST
ಜಪ್ತಿ ಮಾಡಲಾದ ಗಾಂಜಾ ಜೊತೆ ಆರೋಪಿಗಳು ಹಾಗೂ ಅವರನ್ನು ಬಂಧಿಸಿದ ಆರ್‌.ಟಿ.ನಗರ ಪೊಲೀಸರು
ಜಪ್ತಿ ಮಾಡಲಾದ ಗಾಂಜಾ ಜೊತೆ ಆರೋಪಿಗಳು ಹಾಗೂ ಅವರನ್ನು ಬಂಧಿಸಿದ ಆರ್‌.ಟಿ.ನಗರ ಪೊಲೀಸರು   

ಬೆಂಗಳೂರು: ದೊಡ್ಡಬಳ್ಳಾಪುರದ ಬೆಟ್ಟವೊಂದರಲ್ಲಿ ಬೆಳೆದ ಹಸಿ ಗಾಂಜಾ ತಂದು ಆರ್‌.ಟಿ.ನಗರದ ಮೈದಾನದಲ್ಲಿ ಒಣಗಿಸಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಬುಡೆನ್‌ಸಾಬ್ (59), ಕೋಲಾರ ಶ್ರೀನಿವಾಸಪುರದ ಚಂದ್ರಪ್ಪ (40) ಹಾಗೂ ಚಿಕ್ಕಬಳ್ಳಾಪುರ ಗಂಜಿಗುಂಟೆಯ ಮಾರಪ್ಪ (56) ಬಂಧಿತರು. ಅವರಿಂದ 5 ಕೆ.ಜಿ ಗಾಂಜಾ ಹಾಗೂ 23 ಕೆ.ಜಿ ಹಸಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ’ ಎಂದು ಆರ್‌.ಟಿ.ನಗರ ಪೊಲೀಸರು ಹೇಳಿದರು.

‘ಮಾದಕ ವ್ಯಸನಿಯಾಗಿದ್ದ ಸುಲ್ತಾನ್‌ಪಾಳ್ಯದ ಹನುಮಂತಪ್ಪ ಲೇಔಟ್‌ನ ಕಾರ್ತಿಕ್ (22) ಎಂಬಾತನ್ನು ಇತ್ತೀಚೆಗೆ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಬುಡೆನ್‌ಸಾಬ್‌ನಿಂದ ಗಾಂಜಾ ಖರೀದಿ ಮಾಡುತ್ತಿದ್ದ ಬಗ್ಗೆ ಆತ ಮಾಹಿತಿ ನೀಡಿದ್ದ. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿ 5 ಕೆ.ಜಿ ಗಾಂಜಾ ಸಮೇತ ಬುಡೆನ್‌ಸಾಬ್‌ನನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.

ADVERTISEMENT

‘ಗಾಂಜಾ ಮಾರಾಟದಲ್ಲಿ ಪಾಲುದಾರರಾಗಿದ್ದ ಚಂದ್ರಪ್ಪ ಹಾಗೂ ಮಾರಪ್ಪನ ಮಾಹಿತಿಯನ್ನು ಬುಡೆನ್‌ಸಾಬ್ ಬಾಯ್ಬಿಟ್ಟಿದ್ದ. ಜೊತೆಗೆ, ಆರ್‌.ಟಿ.ನಗರದ ಈರುಳ್ಳಿ ಮೈದಾನದಲ್ಲಿ ಹಸಿ ಗಾಂಜಾವನ್ನು ಒಣಗಿಸಲು ಹಾಕಿರುವುದಾಗಿಯೂ ತಿಳಿಸಿದ್ದ. ಮೈದಾನಕ್ಕೆ ಹೋಗಿ ಗಾಂಜಾವನ್ನು ಜಪ್ತಿ ಮಾಡಿ, ಆರೋಪಿಗಳನ್ನೂ ಬಂಧಿಸಲಾಯಿತು’ ಎಂದೂ ಪೊಲೀಸರು ಹೇಳಿದರು.

‘ದೊಡ್ಡಬಳ್ಳಾಪುರ ಬಳಿಯ ಬೆಟ್ಟವೊಂದರಲ್ಲಿ ಆರೋಪಿಗಳು ಗಾಂಜಾ ಬೆಳೆಯುತ್ತಿದ್ದರು. ರಾತ್ರಿ ಸಮಯದಲ್ಲಿ ಗಾಂಜಾ ಕತ್ತರಿಸಿಕೊಂಡು ಬಂದು ಮೈದಾನದಲ್ಲಿ ಹಾಕುತ್ತಿದ್ದರು. ಅದು ಪೂರ್ತಿ ಒಣಗಿದ ನಂತರ ಗ್ರಾಹಕರಿಗೆ ಮಾರುತ್ತಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.