ಬೆಂಗಳೂರು: ಮಕ್ಕಳು ಸೇವಿಸುವ ಸೆರೆಲ್ಯಾಕ್ ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ಇಟ್ಟು ಮುಂಬೈನಿಂದ ಬೆಂಗಳೂರಿಗೆ ತಂದು ಡ್ರಗ್ಸ್ ಪೆಡ್ಲರ್‌ಗಳಿಗೆ ಪೂರೈಸುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ನೈಜೀರಿಯಾ ದೇಶದ ಚುಕ್ಕುದ್ದೀನ್ ಬಂಧಿತ ಆರೋಪಿ.
‘ಆರೋಪಿಯಿಂದ ₹6 ಕೋಟಿ ಮೌಲ್ಯದ ನಾಲ್ಕು ಕೆ.ಜಿ. ತೂಕದ ಎಂಡಿಎಂಎ ಕ್ರಿಸ್ಟೆಲ್, ಎರಡು ಮೊಬೈಲ್, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ವ್ಯಾಪಾರ ವೀಸಾದ ಅಡಿ ಆರೋಪಿ ಭಾರತಕ್ಕೆ ಬಂದಿದ್ದ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನೆಲಸಿ, ಬಟ್ಟೆ ವ್ಯಾಪಾರ ನಡೆಸುತ್ತಿದ್ದ. ವ್ಯಾಪಾರದಲ್ಲಿ ನಷ್ಟವಾದ ಮೇಲೆ ಬೆಂಗಳೂರಿಗೆ ಬಂದಿದ್ದ ಆರೋಪಿ, ತನ್ನ ದೇಶದ ಪ್ರಜೆಗಳನ್ನು ಪರಿಚಯಿಸಿಕೊಂಡಿದ್ದ. ಅವರ ಮೂಲಕ ಡ್ರಗ್ಸ್ ಸಾಗಾಟ ಹಾಗೂ ಪೂರೈಕೆಯ ಬಗೆಯನ್ನು ತಿಳಿದುಕೊಂಡಿದ್ದ. ಆರ್ಥಿಕ ಸಂಕಷ್ಟದಲ್ಲಿದ್ದ ಆರೋಪಿಯು ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ಹಿಡಿದಿದ್ದ. ಮುಂಬೈನಲ್ಲಿರುವ ಸ್ನೇಹಿತರ ಮೂಲಕ ಸೆರೆಲ್ಯಾಕ್ ಸೇರಿದಂತೆ ವಿವಿಧ ಪ್ಯಾಕೆಟ್‌ಗಳಲ್ಲಿ ಎಂಡಿಎಂಎ ಇಟ್ಟು ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ನಂತರ, ನಗರದಲ್ಲಿ ಒಂದು ಗ್ರಾಂಗೆ ₹10 ಸಾವಿರದಿಂದ ₹15 ಸಾವಿರದವರೆಗಿನ ದರಕ್ಕೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಸೆರೆಲ್ಯಾಕ್ ಹಾಗೂ ಸೋಪಿನ ಬಾಕ್ಸ್ ತೆರೆದು ಅದರಲ್ಲಿ ಡ್ರಗ್ಸ್ ಇರಿಸುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ ಮತ್ತೆ ಪ್ಯಾಕ್ ಮಾಡುತ್ತಿದ್ದ’ ಎಂದು ಸಿಸಿಬಿ ಪೊಲೀಸರು ಹೇಳಿದರು.
ಇನ್ನೊಂದು ಪ್ರಕರಣದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಾಸನಪುರ ಮನೆಯಲ್ಲಿ ಆರೋಪಿಯಿಂದ ನಾಲ್ಕು ಕೆ.ಜಿಯಷ್ಟು ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ.
ಮನೆಯಲ್ಲಿ ಗೋಧಿ ಹಿಟ್ಟು ಒಣಗಿಸುವ ರೀತಿಯಲ್ಲಿ ಡ್ರಗ್ಸ್ ಅನ್ನು ಆರೋಪಿ ಒಣಗಿಸಲು ಹಾಕಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಡ್ರಗ್ಸ್ ಪೆಡ್ಲರ್ ಬಂಧನ:
ಮತ್ತೊಂದು ಪ್ರಕರಣದಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಊಬರ್ ಕ್ಯಾಬ್ ಚಾಲಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಆಕಾಶ್(26) ಬಂಧಿತ.
ಆರೋಪಿಯಿಂದ ಸುಮಾರು ₹1.50 ಕೋಟಿ ಮೌಲ್ಯದ 746 ಗ್ರಾಂ ಕೊಕೇನ್ ಮಾದಕ ವಸ್ತು ಜಪ್ತಿ ಮಾಡಲಾಗಿದೆ.
ಆಕಾಶ್ ನಗರದಲ್ಲಿ ಹಲವು ವರ್ಷಗಳಿಂದ ಊಬರ್ ಕ್ಯಾಬ್ ಓಡಿಸಿಕೊಂಡಿದ್ದ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.