ADVERTISEMENT

ಡ್ರಗ್ಸ್: ಬಾಡಿಗೆ ಮನೆಯಲ್ಲೇ ಮಿನಿ ಲ್ಯಾಬ್‌ ಮಾಡಿಕೊಂಡಿದ್ದ ನೈಜೀರಿಯಾ ಪ್ರಜೆ ಬಂಧನ

ಪ್ರೆಷರ್ ಕುಕ್ಕರ್, ರಾಸಾಯನಿಕ ಜಪ್ತಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 19:53 IST
Last Updated 11 ಜನವರಿ 2022, 19:53 IST
ಜಪ್ತಿ ಮಾಡಿರುವ ಪ್ರೆಷರ್ ಕುಕ್ಕರ್ ಹಾಗೂ ಡ್ರಗ್ಸ್
ಜಪ್ತಿ ಮಾಡಿರುವ ಪ್ರೆಷರ್ ಕುಕ್ಕರ್ ಹಾಗೂ ಡ್ರಗ್ಸ್   

ಬೆಂಗಳೂರು: ಬಾಡಿಗೆ ಮನೆಯಲ್ಲಿ ಕಿರು ಪ್ರಯೋಗಾಲಯವನ್ನು (ಮಿನಿ ಲ್ಯಾಬ್) ಸ್ಥಾಪಿಸಿ ಡ್ರಗ್ಸ್ ತಯಾರಿಸಿ ಮಾರುತ್ತಿದ್ದ ಆರೋಪದಡಿ ನೈಜೀರಿಯಾ ಪ್ರಜೆಯೊಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಆರೋಪಿ ಡ್ರಗ್ಸ್ ತಯಾರಿಸುತ್ತಿದ್ದ ಮಾಹಿತಿ ಬಂದಿತ್ತು. ಮನೆ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಲಾಗಿದೆ. ₹ 50 ಲಕ್ಷ ಮೌಲ್ಯದ ಕೊಕೇನ್ ಹಾಗೂ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬಂಧಿತ ಆರೋಪಿ ಜೊತೆ ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದರು. ಅವರೆಲ್ಲ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ, ಆರೋಪಿ ಹೆಸರು ಗೌಪ್ಯವಾಗಿರಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ವ್ಯಾಪಾರ ವೀಸಾದಡಿ 2019ರಲ್ಲಿ ದೇಶಕ್ಕೆ ಬಂದಿದ್ದ ಆರೋಪಿ, ಕೆಲ ತಿಂಗಳು ದೆಹಲಿಯಲ್ಲಿ ನೆಲೆಸಿದ್ದ. ಆರು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು, ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಅಕ್ರಮವಾಗಿ ಹಣ ಸಂಪಾದಿಸಲು ಡ್ರಗ್ಸ್ ಮಾರಾಟ ಮಾಡಲಾರಂಭಿಸಿದ್ದ.’

‘ಪರಿಚಯಸ್ಥರ ಮೂಲಕ ಡ್ರಗ್ಸ್ ಖರೀದಿಸಿ ಆರೋಪಿ ಮಾರುತ್ತಿದ್ದ. ಅದರಿಂದ ಬಂದ ಹಣ ಆತನಿಗೆ ಸಾಲುತ್ತಿರಲಿಲ್ಲ. ಹೀಗಾಗಿ, ಆತನೇ ಡ್ರಗ್ಸ್ ತಯಾರಿಸಲು ಮುಂದಾಗಿದ್ದ. ಅದಕ್ಕಾಗಿ ಬಾಡಿಗೆ ಮನೆಯಲ್ಲೇ ಮಿನಿ ಲ್ಯಾಬ್‌ ಸೃಷ್ಟಿಸಿದ್ದ. ರಾಸಾಯನಿಕ ಹಾಗೂ ಇತರೆ ವಸ್ತುಗಳನ್ನು ಬಳಸಿಕೊಂಡು, ಪ್ರೆಷರ್ ಕುಕ್ಕರ್‌ನಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ. ತನ್ನದೇ ಜಾಲದ ಮೂಲಕ ನಗರದಲ್ಲಿ ಮಾರುತ್ತಿದ್ದ’ ಎಂದೂ ಅಧಿಕಾರಿ ವಿವರಿಸಿದರು.

‘10 ಲೀಟರ್ ಸಾಮರ್ಥ್ಯದ ಪ್ರೆಷರ್ ಕುಕ್ಕರ್, ಪ್ಲಾಸ್ಟಿಕ್ ಕೊಳವೆ, ಡ್ರಗ್ಸ್ ತಯಾರಿಗೆ ಬಳಸುತ್ತಿದ್ದ ಕಚ್ಚಾ ವಸ್ತುಗಳು, 2 ಮೊಬೈಲ್, ತಕ್ಕಡಿ ಹಾಗೂ ದ್ವಿಚಕ್ರ ವಾಹನವನ್ನೂ ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.