ADVERTISEMENT

ಸಿದ್ದಾಪುರ ಠಾಣಾ ವ್ಯಾಪ್ತಿ: ಡ್ರಗ್ಸ್‌ ಜಪ್ತಿ, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 7:24 IST
Last Updated 31 ಜುಲೈ 2021, 7:24 IST
ಪೊಲೀಸರು ಜಪ್ತಿ ಮಾಡಿರುವ ಮಾದಕ ವಸ್ತು ಹಾಗೂ ವಾಹನ.
ಪೊಲೀಸರು ಜಪ್ತಿ ಮಾಡಿರುವ ಮಾದಕ ವಸ್ತು ಹಾಗೂ ವಾಹನ.   

ಬೆಂಗಳೂರು: ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಮಾಕ್ಷಿಪಾಳ್ಯದ ಬಿ.ಆರ್.ಕೌಶಿಕ್ (25) ಹಾಗೂಪದ್ಮನಾಭನಗರದ ಎಸ್.ರಂಗನಾಥ್ (21) ಬಂಧಿತರು.

‘ಇವರು ಲಾಲ್‌ಬಾಗ್ ಸಿದ್ದಾಪುರದ ಕಲ್ಯಾಣಿ ಬಳಿ ಕಾರಿನಲ್ಲಿ ಬಂದು ಮಾದಕ ವಸ್ತುಗಳಾದ ಗಾಂಜಾ, ಎಕ್ಸ್‌ಟೆಸಿ ಮಾತ್ರೆಗಳು, ಹ್ಯಾಶ್ ಆಯಿಲ್, ಎಲ್‌ಎಸ್‌ಡಿಗಳನ್ನು ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಆರೋಪಿಗಳಿಂದ ₹12.75 ಲಕ್ಷ ಬೆಲೆ ಬಾಳುವ 280 ಗ್ರಾಂ. ಗಾಂಜಾ, 0.3 ಮೀ ಎಲ್‌ಎಸ್‌ಡಿ, 230 ಎಕ್ಸ್‌ಟೆಸಿ ಮಾತ್ರೆಗಳು, ಹ್ಯಾಶ್ ಆಯಿಲ್ ಹಾಗೂ ಎರಡು ಮೊಬೈಲ್, ಕಾರು, ನಗದು ಜಪ್ತಿ ಮಾಡಲಾಗಿದೆ. ಬಂಧಿತರ ವಿರುದ್ಧ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ (ಎನ್‌ಡಿಪಿಎಸ್) ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬಂಧಿತ ಕೌಶಿಕ್ ಬಿ.ಎಸ್ಸಿ ಪದವೀಧರ. ಕುಮಾರಸ್ವಾಮಿ ಬಡಾವಣೆ ಠಾಣೆಯಲ್ಲಿ ದಾಖಲಾಗಿದ್ದ ಎನ್‌ಡಿಪಿಎಸ್ ಪ್ರಕರಣದಲ್ಲಿ ಎರಡು ತಿಂಗಳು ಜೈಲಿಗೆ ಹೋಗಿದ್ದ. ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದ ರಂಗನಾಥ್, ಹಣ ಸಂಪಾದಿಸಲು ಮಾದಕ ವಸ್ತುಗಳ ಮಾರಾಟ ದಂಧೆಗೆ ಇಳಿದಿದ್ದ’ ಎಂದೂ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.