ADVERTISEMENT

ಡ್ರಗ್ಸ್ ಮಾರಾಟ: ರೌಡಿ ಸೇರಿ ಮೂವರು ಬಂಧನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 21:10 IST
Last Updated 3 ಜನವರಿ 2023, 21:10 IST
ಸಿಸಿಬಿ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಡ್ರಗ್ಸ್ ಹಾಗೂ ಮೊಬೈಲ್
ಸಿಸಿಬಿ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಡ್ರಗ್ಸ್ ಹಾಗೂ ಮೊಬೈಲ್   

ಬೆಂಗಳೂರು: ನಗರದಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪದಡಿ ರೌಡಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ರೌಡಿ ಸೈಯದ್ ಯಾರಬ್, ಉಮ್ರಾನ್ ಬಾಷಾ ಹಾಗೂ ಶಹಬಾಜ್ ಖಾನ್ ಬಂಧಿತರು. ಇವರಿಂದ ₹ 3 ಲಕ್ಷ ಮೌಲ್ಯದ 25 ಗ್ರಾಂ ಎಂಡಿಎಂಎ, 22 ಎಲ್‌ಎಸ್‌ಡಿ ಕಾಗದ ಚೂರುಗಳು, 1 ಕೆ.ಜಿ ಗಾಂಜಾ, ಎರಡು ಮೊಬೈಲ್ ಹಾಗೂ ತೂಕದ ಯಂತ್ರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆಡುಗೋಡಿ ಠಾಣೆಯ ರೌಡಿ ಪಟ್ಟಿಯಲ್ಲಿ ಸೈಯದ್ ಯಾರಬ್ ಹೆಸರಿದೆ. ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತ, ಜೈಲಿಗೆ ಹೋಗಿ ಬಂದಿದ್ದ. ಅಕ್ರಮವಾಗಿ ಹಣ ಸಂಪಾದಿಸಲೆಂದು ತನ್ನದೇ ತಂಡ ಕಟ್ಟಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ.’

ADVERTISEMENT

‘ಜಗಜೀವನ್‌ರಾಮ್ ನಗರ ಠಾಣೆ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಕಂಪನಿಗಳ ಉದ್ಯೋಗಿಗಳು ಹಾಗೂ ಕೆಲ ಕಾರ್ಮಿಕರು ಆರೋಪಿಗಳ ಬಳಿ ಡ್ರಗ್ಸ್ ಖರೀದಿಸುತ್ತಿದ್ದರು’ ಎಂದು ತಿಳಿಸಿದರು.

‘ಆರೋಪಿಗಳು ತಮ್ಮ ಜೊತೆ ಮಾರಕಾಸ್ತ್ರಗಳನ್ನೂ ಇಟ್ಟುಕೊಂಡು ಓಡಾಡುತ್ತಿದ್ದರು. ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಬಗ್ಗೆಯೂ ಮಾಹಿತಿ ಇದೆ. ಮಾರಕಾಸ್ತ್ರಗಳನ್ನೂ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.