ADVERTISEMENT

ಡ್ರಗ್ಸ್ ಪ್ರಕರಣ: ಪೊಲೀಸರಿಬ್ಬರು ಸಿಸಿಬಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 20:35 IST
Last Updated 23 ಜನವರಿ 2022, 20:35 IST

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಮುಖ್ಯಮಂತ್ರಿ ಮನೆ ಭದ್ರತಾ ಸಿಬ್ಬಂದಿಗಳಿಬ್ಬರನ್ನು ನಗರದ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್‌.ಟಿ.ನಗರದ ಮನೆ ಭದ್ರತೆ ಕರ್ತವ್ಯದಲ್ಲಿದ್ದ ಹೆಡ್‌ ಕಾನ್‌ಸ್ಟೆಬಲ್ ಸಂತೋಷ್ ಹಾಗೂ ಕಾನ್‌ಸ್ಟೆಬಲ್ ಶಿವಕುಮಾರ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿಸಲಾಗಿತ್ತು. ಇದೀಗ ಅವರಿಬ್ಬರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ’ ಪೊಲೀಸ್ ಮೂಲಗಳು ಹೇಳಿವೆ.

‘ಆರ್‌.ಟಿ.ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಲೋಪ ಕಂಡುಬಂದಿತ್ತು. ಇನ್‌ಸ್ಪೆಕ್ಟರ್ ಹಾಗೂ ಪಿಎಸ್‌ಐ ಅವರನ್ನು ಅಮಾನತು ಸಹ ಮಾಡಲಾಗಿತ್ತು. ಇದೇ ಪ್ರಕರಣದ ತನಿಖೆಯನ್ನು ಸಿಸಿಬಿ ಕೈಗೆತ್ತಿಕೊಂಡಿದೆ‘ ಎಂದೂ ತಿಳಿಸಿವೆ.

ADVERTISEMENT

‘ಆಟೊದಲ್ಲಿ ಡ್ರಗ್ಸ್ ತುಂಬಿಕೊಂಡು ಚಾಲಕ, ಆರ್‌.ಟಿ.ನಗರದಲ್ಲಿದ್ದ ಸಂತೋಷ್ ಹಾಗೂ ಶಿವಕುಮಾರ್ ಬಳಿ ಬಂದಿದ್ದ. ಅದೇ ಸಂದರ್ಭದಲ್ಲೇ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಪೊಲೀಸರಿಬ್ಬರು ಸೇರಿ ನಾಲ್ವರನ್ನು ಬಂಧಿಸಿದ್ದರು. ಆಟೊವನ್ನೂ ಜಪ್ತಿ ಮಾಡಿದ್ದರು‘ ಎಂದೂ ಹೇಳಿವೆ.

‘ಇದೇ ಆರೋಪಿಗಳ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಅದರ ತನಿಖೆಯೂ ಸಿಸಿಬಿಗೆ ವರ್ಗವಾಗುವ ಸಾಧ್ಯತೆ ಇದೆ‘ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.