ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಡ್ರಗ್ಸ್ ಮಾರುವುದನ್ನು ವೃತ್ತಿ ಮಾಡಿಕೊಂಡಿದ್ದ ಆರೋಪಿ ಅಖಿಲೇಶ್‌ಕುಮಾರ್‌ನನ್ನು (30) ‘ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಾಣಿಕೆ ತಡೆ (ಪಿಐಟಿ– ಎನ್‌ಡಿಪಿಎಸ್)’ ಕಾಯ್ದೆಯಡಿ ಬಂಧಿಸಲಾಗಿದೆ.
‘ಬಿಹಾರದ ಅಖಿಲೇಶ್‌ಕುಮಾರ್, ಬಾಗಲೂರು ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಬಿಹಾರದಿಂದ ಡ್ರಗ್ಸ್ ತಂದು ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಡ್ರಗ್ಸ್ ಮಾರಾಟ ಮಾಡಲು ಆರೋಪಿ, ಆಹಾರ ಪೂರೈಕೆ ಡೆಲಿವರಿ ಬಾಯ್‌ಗಳನ್ನು ನೇಮಿಸಿಕೊಂಡಿದ್ದ. ಮೊಬೈಲ್ ಕರೆ ಹಾಗೂ ವಾಟ್ಸ್‌ಆ್ಯಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ. ಡೆಲಿವರಿ ಬಾಯ್‌ಗಳ ಮೂಲಕ ಡ್ರಗ್ಸ್ ಕಳುಹಿಸುತ್ತಿದ್ದ. ಪೆಡ್ಲರ್ ಆಗಿ ಬದಲಾಗಿದ್ದ.’
‘ಆರೋಪಿ ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಹಲವು ಬಾರಿ ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನು ಮೇಲೆ ಹೊರಬರುತ್ತಿದ್ದ ಈತ, ಪುನಃ ಡ್ರಗ್ಸ್ ಮಾರಾಟದಲ್ಲಿ ತೊಡಗಿಕೊಳ್ಳುತ್ತಿದ್ದ. ಯುವಜನತೆಯನ್ನು ಮಾದಕ ವ್ಯಸನಿಗಳಾಗಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ಈತನನ್ನು ಪಿಐಟಿ–ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲು ಕೋರಿ ಕಮಿಷನರ್ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ನೀಡಿರುವ ಕಮಿಷನರ್, ತಮ್ಮ ಅಧಿಕಾರ ಚಲಾಯಿಸಿ ಆರೋಪಿಯನ್ನು ಒಂದು ವರ್ಷ ಜೈಲಿನಲ್ಲಿಡಲು ಆದೇಶಿಸಿದ್ದಾರೆ. ಸದ್ಯ ಆರೋಪಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.