ಬೆಂಗಳೂರು: ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ ಆರೋಪದ ಮೇರೆಗೆ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿರುವ ರಾಜಾನುಕುಂಟೆ ಠಾಣೆ ಪೊಲೀಸರು, ಆರೋಪಿಗಳಿಂದ ₹4.5 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಯಲಹಂಕ ತಾಲ್ಲೂಕಿನ ಅದ್ದಿಗಾನಹಳ್ಳಿ ಗ್ರಾಮದಲ್ಲಿ ವಿದೇಶಿ ಪ್ರಜೆಗಳು ವಾಸವಿದ್ದ ಬಾಡಿಗೆ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ, ಮಾದಕ ವಸ್ತುಗಳು ಪತ್ತೆಯಾಗಿವೆ. ನೈಜೀರಿಯಾದ ಅಲ್ಸೊನೆ ಪೀಟರ್ ಒಬಿಯಾಮ್ ಹಾಗೂ ಸಂಡೇ ವಿಂಡಮ್ ಅವರನ್ನು ಬಂಧಿಸಿ, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, 'ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿದೆ. ಆರೋಪಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಬಂದಿದ್ದರು. ಅಲ್ಲಿಂದ ಬೆಂಗಳೂರಿಗೆ ಬಂದು, ಅದ್ದಿಗಾನಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು’ ಎಂದರು.
‘ಅಕ್ರಮವಾಗಿ ಶೇಖರಿಸಿ ಇಟ್ಟಿದ್ದ 2 ಕೆ.ಜಿ. 820 ಗ್ರಾಂ ಎಂಡಿಎಂಎ ಕ್ರಿಸ್ಟಲ್, 7 ಮೊಬೈಲ್ ಫೋನ್ಗಳು, 2 ತೂಕದ ಯಂತ್ರ, ₹2,06,870 ನಗದು ಸೇರಿ ₹ 4.50 ಕೋಟಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.
‘ಆರೋಪಿಗಳು ಯಾರಿಗೂ ಗೊತ್ತಾಗದಂತೆ ಬಟ್ಟೆಗಳನ್ನು ಸಾಗಿಸುವ ರಟ್ಟಿನ ಪೆಟ್ಟಿಗೆಯಲ್ಲಿ ಡ್ರಗ್ಸ್ ತುಂಬಿ ಮಾರಾಟ ಮಾಡುತ್ತಿದ್ದರು. ಅಕ್ಕಪಕ್ಕದ ನಿವಾಸಿಗಳಿಗೆ ಅನುಮಾನ ಬಾರದೆಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿಯ ಕೆಲಸದ ಸಮವಸ್ತ್ರಗಳನ್ನು ಹಾಕಿಕೊಂಡು ಮನೆಗೆ ಬಂದು ಹೋಗುತ್ತಿದ್ದರು. ಆರೋಪಿಗಳ ವಿಚಾರಣೆ ಮುಂದುವರೆಸಲಾಗಿದ್ದು, ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಿ ಡ್ರಗ್ಸ್ ಜಾಲ ಭೇದಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.