ADVERTISEMENT

ಬಾಡಿಗೆ ಮನೆಯಲ್ಲಿ 31 ಕೆ.ಜಿ ಗಾಂಜಾ

ಮಾರಾಟ ಮಾಡುತ್ತಿದ್ದ ಆರೋಪದಡಿ ನೈಜೀರಿಯಾದ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 18:59 IST
Last Updated 28 ಸೆಪ್ಟೆಂಬರ್ 2021, 18:59 IST
ಆರೋಪಿಗಳಿಂದ ಜಪ್ತಿ ಮಾಡಲಾದ ಗಾಂಜಾ ತುಂಬಿದ್ದ ಚೀಲಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ಗಾಂಜಾ ತುಂಬಿದ್ದ ಚೀಲಗಳು   

ಬೆಂಗಳೂರು: ಬಾಡಿಗೆ ಮನೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟುಕೊಂಡು ಮಾರುತ್ತಿದ್ದ ಆರೋಪದಡಿ ನೈಜೀರಿಯಾದ ಇಬ್ಬರು ಪ್ರಜೆಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

'ಚಿನೊನೈ ಇಕೆಚುಕ್ವು (39) ಹಾಗೂ ಕ್ಲಿವಿನ್ ಚಿಬ್ಯುಕೆ ಅನ್ಯವೊ (46) ಬಂಧಿತರು. ಅವರಿಂದ ₹ 10 ಲಕ್ಷ ಮೌಲ್ಯದ 31 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು, ವೀಸಾ ಅವಧಿ ಮುಗಿದರೂ ತಮ್ಮ ದೇಶಕ್ಕೆ ವಾಪಸು ಹೋಗಿರಲಿಲ್ಲ. ಇಲ್ಲಿಯೇ ಬಾಡಿಗೆ ಮನೆಯಲ್ಲಿ ನೆಲೆಸಿ, ಮಾದಕ ವಸ್ತು ಮಾರುತ್ತಿದ್ದರು. ಅದರಿಂದ ಅಕ್ರಮವಾಗಿ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಹೆಣ್ಣೂರು ಠಾಣೆ ವ್ಯಾಪ್ತಿಯ ಹೊರಮಾವು ಸಿ.ಎಂ.ಆರ್ ಬಡಾ ವಣೆಯ 5ನೇ ಅಡ್ಡರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದ 2ನೇ ಮಹಡಿಯ ಮನೆಯಲ್ಲಿ ಆರೋಪಿಗಳು ವಾಸವಿದ್ದರು. ಅದೇ ಮನೆ ಮೇಲೆ ದಾಳಿ ಮಾಡಿ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದೂ ಮಾಹಿತಿ ನೀಡಿದರು.

‘ನಗರದಲ್ಲಿ ತಮ್ಮದೇ ಜಾಲ ಸೃಷ್ಟಿಸಿಕೊಂಡಿದ್ದ ಆರೋಪಿಗಳು, ಅದರ ಮೂಲಕ ಗಾಂಜಾ ಮಾರುತ್ತಿದ್ದರು. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು, ಕೆಲ ಕಾರ್ಮಿಕರು ಗ್ರಾಹಕರಾಗಿದ್ದರು’ ಎಂದೂ ಪೊಲೀಸರು ಹೇಳಿದರು.

ಮಾಲೀಕರ ವಿರುದ್ಧವೂ ಕ್ರಮ; ‘ಮನೆ ಮಾಲೀಕ, ಆರೋಪಿಗಳ ವೀಸಾ ಹಾಗೂ ಪಾಸ್‌ಪೋರ್ಟ್‌ ದಾಖಲೆಗಳನ್ನು ಪರಿಶೀಲಿಸದೇ ಬಾಡಿಗೆ ನೀಡಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

‘ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡುವ ಮುನ್ನ ದಾಖಲೆಗಳನ್ನು ಪರಿಶೀಲಿಸುವುದು ಕಡ್ಡಾಯ. ಜೊತೆಗೆ, ಅಂಥವರ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.