ADVERTISEMENT

ಮನುಷ್ಯ ಎಂದಷ್ಟೇ ಸ್ವೀಕರಿಸಿ: ದ್ಯುತಿ ಚಾಂದ್‌

ಶರತ್‌ ಹೆಗ್ಡೆ
Published 5 ನವೆಂಬರ್ 2019, 19:45 IST
Last Updated 5 ನವೆಂಬರ್ 2019, 19:45 IST
ದ್ಯುತಿ ಚಾಂದ್‌
ದ್ಯುತಿ ಚಾಂದ್‌   

‘ನಾನು ದ್ಯುತಿ ಚಾಂದ್‌. ನಾನೊಬ್ಬ ಮನುಷ್ಯ. ಹಾಗೆ ಸ್ವೀಕರಿಸಿ. ನಾನೊಂದು ಬ್ರ‍್ಯಾಂಡ್‌. ಅದನ್ನು ಯಾವುದಕ್ಕಾದರೂ ಉಪಯೋಗಿಸಬಹುದು ಅಷ್ಟೆ!’

– ಬೆಂಗಳೂರಿನ ಹೋಟೆಲ್‌ ಲಲಿತ್‌ ಅಶೋಕ್‌ನಲ್ಲಿ ಫೇಸ್‌ಬುಕ್‌ ಇತ್ತೀಚೆಗೆ ಆಯೋಜಿಸಿದ್ದ ’ವಿ ದಿ ವಿಮೆನ್‌’ ಸಮಾವೇಶದಲ್ಲಿ ದೇಶದ ಅತಿವೇಗದ ಓಟಗಾರ್ತಿ ದ್ಯುತಿ ಚಾಂದ್‌ ಆತ್ಮವಿಶ್ವಾಸದಿಂದ ಹೇಳಿದ ಮಾತಿದು. ಓಟದ ಬದುಕಿಗೆ ಎದುರಾದ ಹಲವು ಕಠಿಣ ಅಡೆತಡೆ, ಅವಮಾನ, ಸಂಕಷ್ಟಗಳನ್ನು ಬಿಚ್ಚಿಟ್ಟ ಅವರು ಕೊನೆಗೆ ಹೇಳಿದ್ದು ಈ ಮಾತು.

‘ಎಲ್ಲ ಕಷ್ಟಗಳ ಮಧ್ಯೆಯೂ ನನ್ನ ಕನಸುಗಳನ್ನು ಸಾಧಿಸಿದ್ದೇನೆ. ದಾರಿ ಇನ್ನೂ ದೂರ ಇದೆ. ಅದೆಲ್ಲವನ್ನೂ ಸಾಧಿಸುವ ವಿಶ್ವಾಸವಿದೆ. ಅದಕ್ಕೂ ಮುನ್ನ ನನ್ನ ಕುಟುಂಬ ನಾನು ಹೇಗಿದ್ದೇನೋ ಹಾಗೆ ನನ್ನನ್ನು ಸ್ವೀಕರಿಸಬೇಕು. ನಾನು ಅವರೊಂದಿಗೆ ಬಾಳಬೇಕು...‘ ಹೀಗೆ ಹೇಳುವಾಗ ದ್ಯುತಿ ಭಾವುಕರಾದರು.

ADVERTISEMENT

ಇಷ್ಟಕ್ಕೂ ದ್ಯುತಿಗೆ ಆಗಿದ್ದೇನು?

‘ದ್ಯುತಿ ಅವರ ದೇಹದಲ್ಲಿ ಪುರುಷ ಹಾರ್ಮೋನ್‌ಗಳಿವೆ. ಹೀಗಾಗಿ ಅವರನ್ನು ಹೆಣ್ಣು ಎಂದು ಪರಿಗಣಿಸಲಾಗದು ಎಂದು ವಾದಿಸಿದ್ದ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌2014ರಲ್ಲಿ ಅವರಿಗೆ ನಿಷೇಧ ಹೇರಿತ್ತು.ಆ ಪರೀಕ್ಷೆ ಹೇಗೆ ನಡೆಯಿತು ಎಂಬುದನ್ನು ದ್ಯುತಿ ಅವರಿಂದಲೇ ಕೇಳೋಣ.

‘ಅದೇನೋ ಪರೀಕ್ಷೆ ನಡೆಸಿದರು. ಪರೀಕ್ಷೆಯ ಫಲಿತಾಂಶದಲ್ಲಿ ನಾನು ಹೆಣ್ಣಲ್ಲ, ಗಂಡು ಎಂದು ಘೋಷಿಸಿದರು. ವಿಚಿತ್ರ ಎನಿಸಿತು. ನಾನೇನಾದರೂ ಔಷಧ ತೆಗೆದುಕೊಂಡು ಹಾರ್ಮೋನ್‌ ಬದಲಾಯಿಸಿಕೊಂಡಿರಬೇಕು ಎಂಬ ಸಂಶಯ ಅವರಿಗೆ. ಹಾಗೆಂದು ಅವರು ಅದನ್ನೂ ನೇರವಾಗಿ ಹೇಳಲಿಲ್ಲ’ ಎಂದು ನಿಟ್ಟುಸಿರು ಬಿಟ್ಟರು. ಕಣ್ಣಂಚಲ್ಲಿ ನೀರು ಜಿನಿಗಿತ್ತು.

‘ನಿನಗೆ ಮಾಡಿದ್ದು ಸಾಮಾನ್ಯ ಕ್ರೀಡಾಪಟುವಿಗೆ ಮಾಡುವ ಪರೀಕ್ಷೆ ಅಲ್ಲ. ಅದು ಹೈಪರಾಂಡ್ರೊಜಿನಿಸಮ್ ಎಂಬ (ಹರ‍್ಮೋನ್‌) ಪರೀಕ್ಷೆ ಎಂದು ನನ್ನ ಗೆಳೆಯರೊಬ್ಬರು ಹೇಳುವವರೆಗೂ ಅದರ ಬಗ್ಗೆ ನನಗೇನೂ ಗೊತ್ತಿರಲಿಲ್ಲ’ ಎಂದು ಮುಗ್ಧವಾಗಿ ನೋವನ್ನು ತೋಡಿಕೊಂಡರು.

‘ಸರಿ, ನಾನು ಪಟ್ಟು ಬಿಡಲಿಲ್ಲ. ನನಗೆ ಮಾಡಿದ ಪರೀಕ್ಷೆ, ಅದರ ವಿಧಾನ, ಫಲಿತಾಂಶದ ವಿವರಗಳನ್ನು ನೀಡಿ ಎಂದು ಆ ಸಮಿತಿ ಮತ್ತು ವೈದ್ಯರಲ್ಲಿ ಕೇಳಿದೆ. ಅದನ್ನೂ ಸತಾಯಿಸಿ ಕೊಟ್ಟರು. ಆ ದಾಖಲೆಗಳನ್ನು ಪಡೆದು ಸ್ವಿಟ್ಜರ್‌ಲೆಂಡ್‌ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಎರಡು ವರ್ಷಗಳ ಕಾಲ ವ್ಯಾಜ್ಯ ನಡೆಯಿತು. ಕೊನೆಗೂ ನನ್ನ ಹೋರಾಟಕ್ಕೆ ಜಯ ಸಿಕ್ಕಿತು’ ಎಂದು ಹೇಳಿ ಮುಗಿಸುವಾಗ ಅವರ ಮುಖದಲ್ಲಿ ಸಣ್ಣದೊಂದು ಮಂದಹಾಸ ಮೂಡಿತ್ತು.

‘ಈ ನಡುವೆ ದೆಹಲಿಯ ಇಂಗ್ಲಿಷ್‌ ಪತ್ರಿಕೆಗಳೆಲ್ಲಾ ನಾನು ಹೆಣ್ಣಲ್ಲ, ಹೆಣ್ಣಿನ ದೇಹದಲ್ಲಿರುವ ಗಂಡು ಎಂದು ಬರೆದವು. ಅದನ್ನು ನೋಡಿ ಒಡಿಶಾದ ಭಾಷಾ ಪತ್ರಿಕೆಗಳೂ ಅದನ್ನೇ ಬರೆದವು. ಈ ವೇಳೆ ನನಗಾದ ಅವಮಾನ ಅಷ್ಟಿಷ್ಟಲ್ಲ’ ಎಂದು ಮತ್ತೊಮ್ಮೆ ಹನಿಗಣ್ಣಾದರು.

‘ನನ್ನ ದೇಹದಲ್ಲಿರುವುದು ನೈಸರ್ಗಿಕ ಹಾರ್ಮೋನ್‌ಗಳೇ ಹೊರತು ಕೃತ್ರಿಮವಲ್ಲ. ನಾನು ಯಾವುದೇ ಔಷಧ ಸೇವಿಸಿಲ್ಲ ಎಂಬುದು ದೃಢಪಟ್ಟಿದೆ.ಆ ಬಳಿಕ ನನ್ನನ್ನು ತೃತೀಯ ಲಿಂಗಿ ಎಂಬಂತೆ ಗುರುತಿಸಿದರು. ನಾನು ಹೇಗಿರಬೇಕೋ ಗೊತ್ತಾಗಲಿಲ್ಲ. ಅಂತೂ ಅದೆಲ್ಲವನ್ನೂ ಮೀರಿ ಹೊರಬಂದಿರುವೆ’ ಎಂದು ಧೈರ್ಯದಿಂದ ನುಡಿದರು.

ಮೊನ್ನೆ ಸೆಪ್ಟೆಂಬರ್‌ 13 ರಂದು ದೋಹಾದಲ್ಲಿ ನಡೆದ ವಿಶ್ವ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಭಾಗವಹಿಸಿದೆ. ಅಕ್ಟೋಬರ್‌ 12ರಂದು ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್‌ನಲ್ಲಿ 100 ಮೀಟರ್‌ ಓಟದಲ್ಲಿ ನನ್ನದೇ ದಾಖಲೆ ಮುರಿದು ಚಿನ್ನ ಗೆದ್ದೆ ಎಂದು ಬೀಗಿದರು.

ಹೃದಯ ಗೆದ್ದರೆ ಸಾಕು...

ಹೆಣ್ಣಾಗಿ ಹೆಣ್ಣನ್ನೇ ಸಂಗಾತಿಯಾಗಿ ಹೊಂದಿರುವ ಬಗ್ಗೆ ದ್ಯುತಿ ಸಮರ್ಥಿಸಿಕೊಂಡರು.

‘ಸಂಗಾತಿ ಹೆಣ್ಣು, ಗಂಡು ಅನ್ನುವುದಕ್ಕಿಂತ ಆ ವ್ಯಕ್ತಿಯನ್ನು ಹೃದಯ ಒಪ್ಪಿಕೊಂಡರೆ ಸಾಕು.ಆಕೆಯನ್ನು ನನ್ನ ಹೃದಯ ಸ್ವೀಕರಿಸಿದೆ. ಹಾಗಾಗಿ ನಾವು ಜತೆಯಲ್ಲಿದ್ದೇವೆ. ಇದೇ ಕಾರಣಕ್ಕಾಗಿ ನಾನು ಕುಟುಂಬದಿಂದ ದೂರ ಉಳಿಯಬೇಕಾಯಿತು. ನನ್ನ ಸಂಗಾತಿ ಇನ್ನೂ ಅವಮಾನ ಎದುರಿಸುತ್ತಿದ್ದಾಳೆ. ನನ್ನ ಅಕ್ಕ ಈ ವಿಚಾರಕ್ಕಾಗಿ ಸಾಕಷ್ಟು ಹಿಂಸೆ ಕೊಟ್ಟಳು.ಇದರಿಂದಾಗಿ ನನಗೆ ಉನ್ನತಮಟ್ಟದ ತರಬೇತಿ ಪಡೆಯಲಾಗಲಿಲ್ಲ. ನನ್ನ ಅಮ್ಮನಂತೂ ಸಮಾಜಕ್ಕೆ ಹೆದರಿ ನನ್ನ ಆಯ್ಕೆಯನ್ನು ಒಪ್ಪಿಕೊಳ್ಳಲಿಲ್ಲ. ಜಗತ್ತು ಬದಲಾಗಿದೆ ಎಂದು ಎಷ್ಟೇ ಹೇಳಿದರೂ ಅವರು ಬದಲಾಗಲಿಲ್ಲ’ ಎಂದು ನೆನಪಿನ ಸುರುಳಿ ಬಿಚ್ಚಿಟ್ಟರು.

‘ಸುಪ್ರೀಂ ಕೋರ್ಟ್‌ ಕಳೆದ ವರ್ಷ ಸಲಿಂಗ ಕಾಮ ಅಪರಾಧವಲ್ಲ ಎಂದು ಘೋಷಿಸಿತು. ಆ ತೀರ್ಪು ಸ್ವಲ್ಪ ನೆಮ್ಮದಿ, ನಿರಾಳತೆ ತಂದಿದೆ‘ ಎಂದು ಮತ್ತೊಂದು ನಿಟ್ಟುಸಿರುಬಿಟ್ಟರು.

ಮೊದಲು ನನ್ನ ಕುಟುಂಬ ನನ್ನನ್ನು ಒಪ್ಪಿಕೊಳ್ಳಬೇಕು. ತವರು ರಾಜ್ಯ ಒಡಿಶಾದಲ್ಲೊಂದು ಕ್ರೀಡಾ ಅಕಾಡೆಮಿ ಸ್ಥಾಪಿಸಿ ತರಬೇತಿ ನೀಡಬೇಕು ಎಂಬ ತಮ್ಮ ಕನಸನ್ನು ದ್ಯುತಿ ಇದೇ ವೇಳೆ ಹಂಚಿಕೊಂಡರು.

‘ಸಮಾಜ ಸೇವೆಯ ದೃಷ್ಟಿಯಿಂದ ರಾಜಕಾರಣಕ್ಕೂ ಬರಬೇಕೆಂದಿದ್ದೇನೆ. ಇದೆಲ್ಲಕ್ಕಿಂತಲೂ ಮೊದಲು ನಾನು ಕುಟುಂಬ ಸೇರಬೇಕು’ ಎಂದು ಒತ್ತಿ ಹೇಳಿದರು.

* ಎಲ್ಲವನ್ನೂ ಎದುರಿಸಲೇಬೇಕು. ಹೆದರಿದರೆ ಸಾಯುತ್ತೇವೆ...

- ದ್ಯುತಿ ಚಾಂದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.