ADVERTISEMENT

ಕೇಂದ್ರ ಸಚಿವ ಸಂಪುಟ ವಿಸ್ತರಣೆ: ದೆಹಲಿಯಿಂದ ವಾಪಸ್ ಆದ ಡಿವಿಎಸ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 22:52 IST
Last Updated 9 ಜುಲೈ 2021, 22:52 IST
ಡಿ.ವಿ.ಸದಾನಂದಗೌಡರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದ ಬೆಂಬಲಿಗರು
ಡಿ.ವಿ.ಸದಾನಂದಗೌಡರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದ ಬೆಂಬಲಿಗರು   

ಬೆಂಗಳೂರು: ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಅವರು ಶುಕ್ರವಾರ ಸಂಜೆ ನಗರಕ್ಕೆ ಮರಳಿದರು. ಆಗ ಪಕ್ಷದ ಕಾರ್ಯಕರ್ತರು ಅವರಿಗೆ ಆತ್ಮೀಯ ಸ್ವಾಗತ ಕೋರಿದರು.

ವಿಮಾನನಿಲ್ದಾಣದ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸದಾನಂದಗೌಡ ಪರ ಜಯ ಘೋಷಣೆ ಹಾಕಿದರು. ಸದಾನಂದಗೌಡರು ಮುಂದಿನ ಮುಖ್ಯಮಂತ್ರಿ ಆಗಲಿ ಎಂದೂ ಕೆಲವರು ಘೋಷಣೆ ಕೂಗಿದರು.

ಅವರು ವಿಮಾನನಿಲ್ದಾಣದಿಂದ ಹೊರ ಬರುತ್ತಿದ್ದಂತೆ ‘ನಮ್ಮ ಸಂಸದರು ನಮ್ಮ ಹೆಮ್ಮೆ,ನಿಮ್ಮ ಜೊತೆ ನಾವಿದ್ದೇನೆ’ ಎಂಬ ಫಲಕಗಳನ್ನು ಪ್ರದರ್ಶಿಸಿದರು. ವಿಮಾನ ನಿಲ್ದಾಣದಿಂದ ಮನೆಗೆ (ಆರ್. ಎಂ.ವಿ. 2ನೇ ಹಂತ) ತೆರಳುವ ಮಾರ್ಗದಲ್ಲಿ ಶೆಟ್ಟಿಗೆರೆ, ದೊಡ್ಡಜಾಲ, ಮೀನುಕುಂಟೆ, ಹೊಸೂರು, ಶೆಟ್ಟಿಹಳ್ಳಿ ಮುಂತಾದ ಕಡೆ ವಾಹನ ನಿಲ್ಲಿಸಿ ಹೂಮಳೆಗೈದರು. ಇದರಿಂದ ಗೌಡರು ಗದ್ಗದಿತರಾದ ಪ್ರಸಂಗವೂ ನಡೆಯಿತು.

ADVERTISEMENT

ಕೆಲವು ಕಡೆಗಳಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸದಾನಂದಗೌಡರು, ‘ಅಧಿಕಾರದಿಂದ ಇಳಿದಾಗಲೂ ಇಷ್ಟೊಂದು ಪ್ರೀತಿ, ಅಭಿಮಾನ ತೋರಿಸಿದ ಕಾರ್ಯಕರ್ತರ ಋಣ ತೀರಿಸಲು ಸಾಧ್ಯವಿಲ್ಲ. ಇನ್ನಷ್ಟು ಸೇವೆ ಮಾಡಲು ಪ್ರೇರಣೆ ಸಿಕ್ಕಿದೆ. ಪಕ್ಷವನ್ನು ಇನ್ನಷ್ಟು ಗಟ್ಟಿಯಾಗಿ ಸಂಘಟಿಸೋಣ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯಾಗಿಸೋಣ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಏಳೂ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬೇಕು’ ಎಂದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿ ಅವರು, ‘ ಮುಂಬರುವ ದಿನಗಳಲ್ಲಿ ಪಕ್ಷ ಯಾವ ಕೆಲಸವನ್ನು ಹೇಳುತ್ತದೆಯೋ ಅದನ್ನು ಮಾಡಲು ಸಿದ್ಧನಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.