ADVERTISEMENT

ಬೆಂಗಳೂರು: ಮನೆ ಬಾಗಿಲಿಗೆ ಇ–ಖಾತಾ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 15:45 IST
Last Updated 2 ಜೂನ್ 2025, 15:45 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಮನೆಯಲ್ಲಿ ಕುಳಿತೇ ಇ–ಖಾತಾವನ್ನು ‘ಜನಸೇವಕರಿಂದ’  ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ರಾಜ್ಯ ಸರ್ಕಾರದ ಹಲವು ಸೇವೆಗಳನ್ನು ಮನೆಗೆ ಒದಗಿಸುವ https://janasevaka.karnataka.gov.in/ ವೆಬ್‌ಸೈಟ್‌ ಮೂಲಕ ಬಿಬಿಎಂಪಿ ಇ–ಖಾತಾವನ್ನೂ ಪಡೆಯಬಹುದಾಗಿದೆ.

ವೆಬ್‌ಸೈಟ್‌ ಅಥವಾ 080–49203888ಗೆ ಮಾಲೀಕರು ಕರೆ ಮಾಡಿ, ‘ಜನಸೇವಕರು’ ಮನೆಗೆ ಬರುವ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು. ಮಾಲೀಕರ ಆಧಾರ್‌, ಆಸ್ತಿ ತೆರಿಗೆ ಎಸ್‌ಎಎಸ್‌ ಅರ್ಜಿ ಸಂಖ್ಯೆ, ಸ್ವತ್ತಿನ ಕ್ರಯಪತ್ರ, ಬೆಸ್ಕಾಂ ಖಾತೆ ಸಂಖ್ಯೆ, ಸ್ವತ್ತಿನ ಚಿತ್ರವನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಜನಸೇವಕರು ಬಂದಾಗ ಈ ದಾಖಲೆಗಳನ್ನು ನೀಡಿದರೆ, ಅವರು ಇ–ಖಾತೆಗೆ ಅರ್ಜಿ ಸಲ್ಲಿಸುತ್ತಾರೆ. ಎರಡು ಅಥವಾ ಮೂರು ದಿನಗಳಲ್ಲಿ ಇ–ಖಾತೆಯನ್ನು ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ADVERTISEMENT

ಇ–ಖಾತಾ ಅರ್ಜಿಗೆ ₹45, ಪ್ರತಿ ಪುಟ ಸ್ಕ್ಯಾನ್‌, ಅಪ್‌ಲೋಡ್‌ಗೆ ₹5, ಮನೆ ಬಾಗಿಲಿಗೆ ಜನಸೇವಕನ ಸೇವೆಗೆ ₹115 ಶುಲ್ಕ ಪಾವತಿಸಬೇಕಾಗುತ್ತದೆ. ದಾಖಲೆಗಳ ಪುಟ ಹೆಚ್ಚಿದ್ದರೆ, ಪ್ರತಿ ಪುಟಕ್ಕೆ ₹5 ಹೆಚ್ಚಾಗುತ್ತದೆ.

‘ಬಿಬಿಎಂಪಿಯ ಯಾವುದೇ ಕಚೇರಿಗೆ ಭೇಟಿ ನೀಡಬೇಡಿ ಅಥವಾ ಕರೆ ಮಾಡಬೇಡಿ’ ಎಂಬ ಘೋಷವಾಕ್ಯದಡಿ ‘ನಿಮ್ಮ ಮನೆಯಲ್ಲೇ ಕುಳಿತು ಬಿಬಿಎಂಪಿ ಇ–ಖಾತೆಯನ್ನು ಪಡೆದುಕೊಳ್ಳಿ’ ಯೋಜನೆಯನ್ನು ಜಾರಿಗೆ ತರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.