ADVERTISEMENT

ಇ–ಖಾತಾ: ಘೋಷಿಸದ ಪ್ರದೇಶಕ್ಕೆ ತೆರಿಗೆ; ಷೋಕಾಸ್‌ ನೋಟಿಸ್‌

ಕಾವೇರಿ ನೋಂದಣಿ ದಾಖಲೆಗಿಂತ ವಿಭಿನ್ನವಾಗಿದ್ದರೆ ತೆರಿಗೆ ವಿಮರ್ಶೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 16:16 IST
Last Updated 11 ಆಗಸ್ಟ್ 2025, 16:16 IST
   

ಬೆಂಗಳೂರು: ನೋಂದಣಿಯಲ್ಲಿನ ದಾಖಲೆಗಿಂತ ಆಸ್ತಿಯ ಪ್ರದೇಶ ಹೆಚ್ಚಿದ್ದರೆ, ಪಾರ್ಕಿಂಗ್‌ ಜಾಗವಿದ್ದು ಅದು ತೆರಿಗೆ ವ್ಯಾಪ್ತಿಯಲ್ಲಿ ಇಲ್ಲದಿದ್ದರೆ, ಅಂತಹ ಆಸ್ತಿಗಳ ಮಾಲೀಕರಿಗೆ ಬಿಬಿಎಂಪಿ ‘ಷೋಕಾಸ್‌ ನೋಟಿಸ್‌’ ಜಾರಿ ಮಾಡುತ್ತಿದೆ.

‘ಇ–ಖಾತಾ’ ಪಡೆದುಕೊಂಡು ಮಾಲೀಕತ್ವ ದೃಡೀಕರಿಸಿಕೊಳ್ಳಿ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ನಮ್ಮಿಂದ ಹೆಚ್ಚುವರಿ ಆಸ್ತಿ ತೆರಿಗೆಯನ್ನು ಪಡೆದುಕೊಳ್ಳಲು ಹಲವು ದಾರಿಗಳನ್ನು ಕಂಡುಕೊಳ್ಳುತ್ತಿದೆ’ ಎಂದು ನಾಗರಿಕರು ಆರೋಪಿಸಿದ್ದಾರೆ.

ಇ–ಖಾತಾ ಪಡೆಯಲು ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ ಸಂದರ್ಭದಲ್ಲಿ ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲೇ ಪರಾಮರ್ಶಿಸಿ, ವ್ಯತ್ಯಾಸ ಕಂಡು ಬಂದಾಗ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ, ವ್ಯತ್ಯಾಸದ ಮೊತ್ತವನ್ನು 15 ದಿನದಲ್ಲಿ ಪಾವತಿಸಬೇಕು ಎಂದು ಸೂಚಿಸಲಾಗುತ್ತಿದೆ.

ADVERTISEMENT

ಏಕ ನಿವೇಶನ/ ಕಟ್ಟಡ ಮಾಲೀಕರಿಗಿಂತ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ ಮಾಲೀಕರಿಗೆ ಹೆಚ್ಚಾಗಿ ನೋಟಿಸ್‌ ಜಾರಿಯಾಗುತ್ತಿದೆ. ನಾಗರಿಕರಿಂದ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ‘ಹಲವು ವರ್ಷಗಳಿಂದ ಪಾವತಿಸುತ್ತಿರುವುದಕ್ಕಿಂತ ಹೆಚ್ಚಿನ ತೆರಿಗೆ ಏಕೆ ಪಾವತಿಸಬೇಕು’ ಎಂದು ಪ್ರಶ್ನಿಸುತ್ತಿದ್ದಾರೆ.

‘ಫ್ಲ್ಯಾಟ್‌ ಆಸ್ತಿ ತೆರಿಗೆಯನ್ನು ‘ಸೂಪರ್‌ ಬಿಲ್ಡ್‌ ಅಪ್‌ ಏರಿಯಾ’ಗೆ ಸ್ವಯಂ ಘೋಷಣಾ ವ್ಯವಸ್ಥೆಯಲ್ಲಿ (ಎಸ್ಎಎಸ್‌) ನಿಗದಿ ಮಾಡಿ ಪಾವತಿಸಲಾಗುತ್ತಿದೆ. ಕಾರ್‌ ಪಾರ್ಕಿಂಗ್‌ ಬಗ್ಗೆ ಇದರಲ್ಲಿ ಮಾಹಿತಿ ನೀಡಿರುವುದಿಲ್ಲ. ಇ–ಖಾತಾ ನೀಡುವ ಪ್ರಕ್ರಿಯೆಯಲ್ಲಿ ಕಾವೇರಿ ಆನ್‌ಲೈನ್‌ನಲ್ಲಿ ಕ್ರಯಪತ್ರದೊಂದಿಗಿರುವ ಮಾಹಿತಿ ಹಾಗೂ ಫ್ಲೋರ್‌ ಏರಿಯಾ, ಸೂಪರ್ ಬಿಲ್ಡ್‌ ಅಪ್‌ ಏರಿಯಾ, ಕಾಮನ್‌ ಏರಿಯಾ, ಪಾರ್ಕಿಂಗ್‌ ವಿಸ್ತೀರ್ಣಗಳನ್ನು ಮಾಲೀಕರೇ ನಮೂದಿಸುತ್ತಾರೆ. ಇದರಲ್ಲಿ ವ್ಯತ್ಯಾಸ ಕಂಡು ಬಂದಾಗ, ಅದಕ್ಕೆ ತೆರಿಗೆಯನ್ನು ನಿಗದಿಪಡಿಸಿ, ಅದನ್ನು ಪಾವತಿಸುವಂತೆ ನೋಟಿಸ್‌ ನೀಡಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಎಸ್‌ಎಎಸ್‌ನಲ್ಲಿ ಮಾಲೀಕರೊಬ್ಬರು ವಸತಿ ಪ್ರದೇಶದ 1275 ಚದರಡಿ ಕಟ್ಟಡಕ್ಕೆ  ಇ ವಲಯದಲ್ಲಿ ₹2,968 ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. 120 ಚದರಡಿಯ ಪಾರ್ಕಿಂಗ್‌ ಪ್ರದೇಶವನ್ನು ಇ–ಖಾತಾ ಪ್ರಕ್ರಿಯೆಯಲ್ಲಿ ದಾಖಲಿಸಿದ್ದಾರೆ. ಇದಕ್ಕೆ ತೆರಿಗೆ ಪಾವತಿಸಿರಲಿಲ್ಲ. ಹೀಗಾಗಿ, ಅದಕ್ಕೆ ₹139 ವ್ಯತ್ಯಾಸ ತೆರಿಗೆಯನ್ನು ಪಾವತಿಸಲು ನೋಟಿಸ್‌ ಜಾರಿ ಮಾಡಲಾಗಿದೆ. ಹೆಚ್ಚುವರಿಯಾಗಿ ತೆರಿಗೆ ಕೇಳುತ್ತಿಲ್ಲ’ ಎಂದರು.

ಪಾರ್ಕಿಂಗ್‌ ಪ್ರದೇಶವನ್ನು ಫ್ಲ್ಯಾಟ್‌ನ ತೆರಿಗೆಯಲ್ಲಿ ಸೇರಿಸಲಾಗುವುದಿಲ್ಲ. ಫ್ಲ್ಯಾಟ್ ಆಸ್ತಿ ತೆರಿಗೆ ದರದ ಅರ್ಧದಷ್ಟು ಪ್ರತ್ಯೇಕ ತೆರಿಗೆಯನ್ನು ವಿಧಿಸಲಾಗುತ್ತದೆ. ಇದು 2008ರಿಂದಲೇ ಜಾರಿಯಲ್ಲಿದೆ.
ಮುನೀಶ್ ಮೌದ್ಗಿಲ್, ವಿಶೇಷ ಆಯುಕ್ತ, ಕಂದಾಯ ವಿಭಾಗ, ಬಿಬಿಎಂಪಿ
‘ಪಾರ್ಕಿಂಗ್‌ಗೆ ಹೆಚ್ಚು ತೆರಿಗೆ ವಸೂಲಿ’
‘ಫ್ಲ್ಯಾಟ್‌ ಆಸ್ತಿ ತೆರಿಗೆಯಲ್ಲಿ ಪಾರ್ಕಿಂಗ್‌, ಕಾಮನ್‌ ಏರಿಯಾದ ಶುಲ್ಕವೂ ಸೇರಿರುವುದರಿಂದ ಪ್ರತ್ಯೇಕವಾಗಿ ತೆರಿಗೆ ಪಾವತಿಸುವಂತಿಲ್ಲ ಎಂದು ರೆರಾ ಹೇಳಿದೆ. ಅದರಂತೆಯೇ ಇಲ್ಲಿಯವರೆಗೆ ಆಸ್ತಿ ತೆರಿಗೆ ಪಾವತಿಸಲಾಗುತ್ತಿತ್ತು. ಆದರೆ, ಇದೀಗ ಬಿಬಿಎಂಪಿಯವರು ಇ–ಖಾತಾ ಪಡೆದುಕೊಂಡ ಮೇಲೆ ಪಾರ್ಕಿಂಗ್‌ಗೆ ಪ್ರತ್ಯೇಕ ತೆರಿಗೆ ನೀಡಬೇಕು. ಅದನ್ನು ಕೂಡಲೇ ಪಾವತಿಸಬೇಕು ಎಂದು ನೋಟಿಸ್‌ ನೀಡಿ ಜನರನ್ನು ಹಿಂಸಿಸುತ್ತಿದ್ದಾರೆ’ ಎಂದು ಮಾಲೀಕರೊಬ್ಬರು ಅಳಲು ತೋಡಿಕೊಂಡರು.

ಆಕ್ಷೇಪಣೆಗೆ ಅವಕಾಶ: ಮುನೀಶ್‌

‘ಕ್ರಯ ಪತ್ರದಲ್ಲಿರುವ ಪ್ರದೇಶಕ್ಕಿಂತ ಕಡಿಮೆ ಪ್ರದೇಶಕ್ಕೆ ಆಸ್ತಿ ತೆರಿಗೆ ಪಾವತಿಸಿದ ಸಂದರ್ಭದಲ್ಲಷ್ಟೇ ಬಿಬಿಎಂಪಿ ನೋಟಿಸ್ ನೀಡುತ್ತಿದೆ. ಆನ್‌ಲೈನ್‌ನಲ್ಲಿ ಆಕ್ಷೇಪಣೆ ಅಥವಾ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ದಾಖಲೆಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗುತ್ತದೆ. BBMPeNyaya.karnataka.gov.in ಮೂಲಕ ಆನ್‌ಲೈನ್‌ನಲ್ಲಿ ನಾಗರಿಕರು ಆಕ್ಷೇಪಣೆ ಸಲ್ಲಿಸಬಹುದು’ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

‘ಹಿಂದಿನ ಹಸ್ತಚಾಲಿತ ವ್ಯವಸ್ಥೆಗೆ ಹೋಲಿಸಿದರೆ ಇದು ತುಂಬಾ ಪಾರದರ್ಶಕ, ಆನ್‌ಲೈನ್ ವ್ಯವಸ್ಥೆಯಾಗಿದೆ. ಹಿಂದಿನ ವ್ಯವಸ್ಥೆಯಲ್ಲಿ ಸ್ಥಳೀಯ ಕಂದಾಯ ಪರಿವೀಕ್ಷಕರು/ತೆರಿಗೆ ನಿರೀಕ್ಷಕರು ನೋಟಿಸ್‌ ನೀಡುತ್ತಿದ್ದರು. ಆಕ್ಷೇಪಣೆ ಸ್ಥಳೀಯ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಸಲ್ಲಿಸಬೇಕಾಗುತ್ತಿತ್ತು. ನಾಗರಿಕರು ಸ್ಥಳೀಯ ಸಿಬ್ಬಂದಿಯ ಮೇಲೆ ಅವಲಂಬಿತರಾಗುತ್ತಿದ್ದರು. ಈಗ ಆನ್‌ಲೈನ್‌ನಲ್ಲೇ ಎಲ್ಲ ಪ್ರಕ್ರಿಯೆ ನಡೆಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.