ADVERTISEMENT

ಗಣಿ ಲಾಬಿಗೆ ಮಣೆ ಹಾಕಿದ ಸರ್ಕಾರ

ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನ: ಇಎಸ್‌ಜೆಡ್‌ ಕಡಿತಕ್ಕೆ ಪರಿಸರ ತಜ್ಞರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 22:56 IST
Last Updated 12 ಮಾರ್ಚ್ 2020, 22:56 IST
   
""

ಬೆಂಗಳೂರು: ‘ಸರ್ಕಾರಕ್ಕೆ ಪರಿಸರ ಸಂರಕ್ಷಣೆಗಿಂತ ಗಣಿಗಾರಿಕೆ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮವೇ ಮುಖ್ಯವಾಗಿದೆ. ಬೆಂಗಳೂರು ನಗರದ ‘ಹಸಿರು ರಕ್ಷಾ ಕವಚ’ವನ್ನು ಉಳಿಸಿಕೊಳ್ಳಲು ರಾಜಕಾರಣಿಗಳಿಗೆ ಎಳ್ಳಿನಿತೂ ಕಾಳಜಿ ಇಲ್ಲ’

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ (ಇಎಸ್‌ಜೆಡ್‌) ವ್ಯಾಪ್ತಿಯನ್ನು 100.12 ಚದರ ಕಿ.ಮೀಗಳಷ್ಟು ಕಡಿತಗೊಳಿ‌ಸಿ ಅಂತಿಮ ಅಧಿಸೂಚನೆ ಹೊರಡಿಸಿರುವ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ ಕ್ರಮಕ್ಕೆ ಪರಿಸರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಬಗೆ ಇದು.

ರಾಜಧಾನಿಯಿಂದ ಕೇವಲ 22 ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಉದ್ಯಾನ ಆಪತ್ತಿನಲ್ಲಿ ಸಿಲುಕಲಿದೆ. ಪರಿಸರ ಸಂರಕ್ಷಣಾ ಕಾಯ್ದೆಯ ರಕ್ಷಣೆಯ ಹೊರತಾಗಿಯೂ ಈ ಉದ್ಯಾನದ ಆಸುಪಾಸಿನಲ್ಲಿ ಗಣಿಗಾರಿಕೆ, ವಾಣಿಜ್ಯೀಕರಣ ಅವ್ಯಾಹತವಾಗಿದೆ. ಇದರ ಆಸುಪಾಸಿನ ಪರಿಸರ ಸೂಕ್ಷ ಪ್ರದೇಶಗಳು ಈಗ ಕಾನೂನಿನ ರಕ್ಷಣೆಯನ್ನೂ ಕಳೆದುಕೊಳ್ಳುವಂತಹ ಭೀತಿಯನ್ನು ಎದುರಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸುಪ್ರೀಂ ಕೋರ್ಟ್‌ನ ಕಠಿಣ ನಿರ್ಧಾರದಿಂದಾಗಿ ಇಎಸ್‌ಜೆಡ್‌ ಪರಿಕಲ್ಪನೆ ಬಂತು. ಇಎಸ್‌ಜೆಡ್‌ಗಳು ರಾಷ್ಟ್ರಿಯ ಉದ್ಯಾನದ ಪಾಲಿಗೆ ಆಘಾತ ನಿಗ್ರಹಿಸುವ (ಶಾಕ್‌ ಅಬ್ಸರ್ವರ್‌) ತಾಣಗಳಾಗಬೇಕು ಎಂಬುದು ಸುಪ್ರೀಂ ಕೋರ್ಟ್‌ನ ಆಶಯವಾಗಿತ್ತು. ಅದಕ್ಕೆ ತದ್ವಿರುದ್ಧವಾಗಿ ಸರ್ಕಾರ ಕ್ರಮ ಕೈಗೊಂಡಿರುವುದು ಬೇಸರ ಮೂಡಿಸಿದೆ’ ಎನ್ನುತ್ತಾರೆ ವನ್ಯಜೀವಿ ತಜ್ಞ ಪ್ರವೀಣ್‌ ಭಾರ್ಗವ್‌.

ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕಾದ ರಾಜ್ಯ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೇ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ.

ಕೇಂದ್ರ ಸಚಿವಾಲಯದ ನಿರ್ದೇಶಕ ಡಾ.ಸುಬ್ರತಾ ಬೋಸ್‌ 2019ರ ಆ.20ರಂದು ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ವನ್ಯಜೀವಿ) ಮತ್ತು ವನ್ಯಜೀವಿ ವಾರ್ಡನ್‌ಗೆ ಪತ್ರ ಬರೆದು, ಇಎಸ್‌ಜೆಡ್‌ ವ್ಯಾಪ್ತಿಯನ್ನು 2016ರ ಮೂಲ ಪ್ರಸ್ತಾವದಲ್ಲಿರುವಷ್ಟೇ ಉಳಿಸಿಕೊಳ್ಳುವ ಸಾಧ್ಯತೆ ಬಗ್ಗೆ ಹಾಗೂ ಇಎಸ್‌ಜೆಡ್‌ ಕಡಿತ ಮಾಡಿದರೆ ಅದರಿಂದ ಆನೆ ಕಾರಿಡಾರ್‌ ಮೇಲಾಗುವ ಪರಿಣಾಮಗಳ ಬಗ್ಗೆ ವರದಿ ಕೇಳಿದ್ದರು. ಇದಕ್ಕೆ 2019ರ ಅ. 25ರಂದು ಉತ್ತರಿಸಿದ್ದ ‌ಪಿಸಿಸಿಎಫ್‌ (ವನ್ಯಜೀವಿ) ಸಂಜಯ್‌ ಮೋಹನ್‌, ‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಬೆಂಗಳೂರು ನಗರಕ್ಕೆ ಸಮೀಪದಲ್ಲಿದೆ. ಹಾಗಾಗಿ, ರಾಷ್ಟ್ರೀಯ ಉದ್ಯಾನದ ಸುತ್ತಲೂ ಕನಿಷ್ಠ ವ್ಯಾಪ್ತಿಯಷ್ಟು ಇಎಸ್‌ಜೆಡ್‌ ನಿರ್ವಹಣೆ ಮಾಡುವುದು ಕಷ್ಟ. ಈ ಪ್ರಸ್ತಾವದ ವಿಚಾರದಲ್ಲಿ 2017ರ ಫೆ.10ರಂದು ಸಂಪುಟ ಉಪಸಮಿತಿಯ ಕೈಗೊಂಡ ನಿರ್ಣಯದಲ್ಲಿ ಮಾರ್ಪಾಡು ಮಾಡುವ ಅಗತ್ಯ ಇಲ್ಲ’ ಎಂದು ತಿಳಿಸಿದ್ದರು.

ಉಲ್ಟಾ ಹೊಡೆದ ಬಿಜೆಪಿ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಇಎಸ್‌ಜೆಡ್‌ ಉಳಿಸಲು ಪರಿಸರ ಕಾರ್ಯಕರ್ತರು ಕೈಗೊಂಡಿದ್ದ ಹೋರಾಟಕ್ಕೆ ಸಂಸದರಾದ ಬಿಜೆಪಿಯ ಪಿ.ಸಿ.ಮೋಹನ್‌, ತೇಜಸ್ವಿಸೂರ್ಯ ಹಾಗೂ ರಾಜೀವ ಚಂದ್ರಶೇಖರ್‌ ದನಿಗೂಡಿಸಿದ್ದರು. ಪರಿಸರ ಕಾರ್ಯಕರ್ತರು ಹಿಂದೆ ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ ಅವರನ್ನು ಭೇಟಿ ಮಾಡಿ ಇಎಸ್‌ಜೆಡ್‌ ಅನ್ನು ಮೂಲದಲ್ಲಿರುವಷ್ಟೇ ಉಳಿಸಿಕೊಳ್ಳುವುದರ ಮಹತ್ವ ವಿವರಿಸಲು ನಿಯೋಗ ಒಯ್ದಾಗ ಬಿಜೆಪಿ ಸಂಸದರೂ ಜತೆಗಿದ್ದರು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಸರ್ಕಾರವೇ ಇಎಸ್‌ಜೆಡ್‌ ಕಡಿತಗೊಳಿಸಿ ಅಧಿಸೂಚನೆ ಹೊರಡಿಸಿದೆ.

ಬನ್ನೇರುಘಟ್ಟ ನೇಚರ್ ಕನ್ಸರ್ವೇಶನ್ ಟ್ರಸ್ಟ್‌ನವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು 2020ರ ಜನವರಿ 20 ರಂದು ವಿಲೇವಾರಿ ಮಾಡಿದ್ದ ಹೈಕೋರ್ಟ್, ‘ಕೇಂದ್ರ ಇಎಸ್‌ಜೆಡ್‌ ವ್ಯಾಪ್ತಿ ನಿಗದಿಸಿ ಅಂತಿಮ ಅಧಿಸೂಚನೆ ಹೊರಡಿಸುವವರೆಗೆ ಉದ್ಯಾನದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ವಾಣಿಜ್ಯ ಅಥವಾ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ’ ಎಂದು ಹೇಳಿತ್ತು. ಇದಾದ ಹತ್ತೇ ದಿನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರ ಪರಿಸರ ಸಚಿವರಿಗೆ ಪತ್ರ ಬರೆದಿದ್ದರು.

‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ಅನೇಕ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹಾಗಾಗಿ ರಾಜ್ಯ ಸರ್ಕಾರ ಪ್ರಸ್ತಾಪಿಸಿರುವಂತೆಯೇ ಇಎಸ್‌ಜೆಡ್‌ ಕುರಿತ ಅಂತಿಮ ಅಧಿಸೂಚನೆ ಪ್ರಕಟಿಸಬೇಕು’ ಎಂದು ಅವರು ಒತ್ತಾಯಿಸಿದ್ದರು.

ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುವ ಆತಂಕ
ಸರ್ಕಾರದ ಈ ನಡೆಯಿಂದ ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನ ಅಪಾಯಕ್ಕೆ ಸಿಲುಕಲಿದೆ. ಈ ಪ್ರದೇಶ ಪ್ರಮುಖ ಆನೆ ಕಾರಿಡಾರ್‌ಗಳಲ್ಲಿ ಒಂದು. ಸರಾಸರಿ 4.5 ಕಿ.ಮೀಗಳಷ್ಟಿದ್ದ ಇಎಸ್‌ಜೆಡ್‌ ಇನ್ನು ಗರಿಷ್ಠ 1 ಕಿ.ಮೀ.ಗೆ ಸೀಮಿತವಾಗಲಿದೆ. ಕೆಲವು ಕಡೆ 100 ಮೀ ಪರಿಸರ ಸೂಕ್ಷ್ಮ ಪ್ರದೇಶ ಮಾತ್ರ ಉಳಿಯಲಿದೆ. ಈ ಪ್ರದೇಶವು ಚಿರತೆ, ಅಡವಿನಾಯಿ, ಕಾಡುಕೋಣ, ಕಡವೆ, ಕರದಿ, ಕಾಡುಪಾಪ ಸಸ್ತನಿಗಳು ಹಾಗೂ ರಣಹದ್ದು, ಹಳದಿ ಕಂಠದ ಪಿಕಳಾರ ಹಕ್ಕಿ ಮೊದಲಾದ ಅಪೂರ್ವ ಪ್ರಾಣಿ ಸಂಕುಲಗಳಿಗೆ ನೆಲೆ ಕಲ್ಪಿಸಿದೆ. ಇಎಸ್‌ಜೆಡ್‌ ಕಡಿತದಿಂದ ಈ ಭಾಗದಲ್ಲಿ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುವ ಆತಂಕವಿದೆ.

ತಜ್ಞರು ಏನನ್ನುತ್ತಾರೆ?

‘ವೈಜ್ಞಾನಿಕ ವಿಶ್ಲೇಷಣೆ ನಡೆಸದೆ ಕ್ರಮ’
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಗಳೂರು ನಗರದ ಕಡೆಗೆ ಮೊದಲೇ ಇಎಸ್‌ಜೆಡ್‌ ವ್ಯಾಪ್ತಿ ಕಿಡಿದಾಗಿತ್ತು. ಹಾಗಾಗಿ ಸರ್ಕಾರ ಯಾವ ಉದ್ದೇಶಕ್ಕಾಗಿ ಈ ನಿರ್ಧಾರ ಕೈಗೊಂಡಿದೆಯೋ ಆ ಆಶಯ ಈಡೇರದು. ಅದರ ಬದಲು ಇನ್ನು ದಕ್ಷಿಣ ದಿಕ್ಕಿನಲ್ಲಿ ಕಾವೇರಿ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲೂ ಇಎಸ್‌ಜೆಡ್‌ ಕಡಿಮೆಯಾಗಲಿದೆ.

ಸರ್ಕಾರ ಯಾವುದೇ ವೈಜ್ಞಾನಿಕ ವಿಶ್ಲೇಷಣೆ ನಡೆಸದೆ ಕೇವಲ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿರುವುದು ಸ್ಪಷ್ಟ. ಈ ರಾಷ್ಟ್ರೀಯ ಉದ್ಯಾನದ ಪ್ರಾಮುಖ್ಯತೆಯನ್ನು ಅಧಿಸೂಚನೆಯಲ್ಲೇ ಸ್ಪಷ್ಟಪಡಿಸಲಾಗಿದೆ. ಇಎಸ್‌ಜೆಡ್‌ ವ್ಯಾಫ್ತಿಯನ್ನು ಮೂಲದಲ್ಲಿರುವಷ್ಟೇ ಉಳಿಸಿಕೊಳ್ಳಲು ಅನೇಕ ಸಂಘ ಸಂಸ್ಥೆಗಳು ಹೋರಾಟ ನಡೆಸಿವೆ. ಇಷ್ಟೆಲ್ಲ ಆದ ಬಳಿಕವೂ ಹಠಕ್ಕೆ ಬಿದ್ದು ಇಎಸ್‌ಜೆಡ್‌ ಕಡಿತ ಮಾಡಿದ್ದೇಕೆ ಎಂದೇ ಸ್ಪಷ್ಟವಾಗದು.
-ಪ್ರವೀಣ್‌ ಭಾರ್ಗವ್, ಟ್ರಸ್ಟಿ, ವೈಲ್ಡ್‌ಲೈಫ್‌ ಫರ್ಸ್ಟ್‌

**
‘ಜನರ ಬೆನ್ನಿಗೆ ಚೂರಿ ಹಾಕಿದ ಸರ್ಕಾರ’
ನಾವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಉಳಿಸಿ ಹೋರಾಟ ಕೈಗೊಂಡಾಗ ಬಿಜೆಪಿ ನಾಯಕರೂ ಕೈಜೋಡಿಸಿದ್ದರು. ಅಧಿಕಾರಕ್ಕೆ ಬಂದ ಬಳಿಕ ಅವರ ವರಸೆಯೇ ಬದಲಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತದೆ ಎಂಬ ನಂಬಿಕೆ ಹುಸಿಯಾಗಿದೆ. ಇಎಸ್‌ಜೆಡ್‌ ಕಡಿತ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ. ಈ ಸರ್ಕಾರವೂ ಗಣಿ ಲಾಬಿಗೆ ಹಾಗೂ ರಿಯಲ್‌ ಎಸ್ಟೇಟ್‌ ಲಾಬಿಗೆ ಮಣಿದಿದೆ. ನಗರದ ಜನರ ಬೆನ್ನಿಗ ಚೂರಿ ಹಾಕುವ ಕೆಲಸ ಮಾಡಿದೆ. ಇದರಿಂದ ವಿಚಲಿತರಾಗದೇ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ.

ಬನ್ನೇರು ಘಟ್ಟ ಉಳಿಸುವಂತೆ ಕೋರಿವರ್ಷದ ಹಿಂದೆ ಆನ್‌ಲೈನ್‌ ಅಭಿಯಾನ ಹಮ್ಮಿಕೊಂಡಾಗ 1 ಲಕ್ಷಕ್ಕೂ ಅಧಿಕ ಮಂದಿ ಬೆಂಬಲ ವ್ಯಕ್ತಪಡಿಸಿದ್ದರು. 15 ದಿನಗಳ ಹಿಂದೆ ನಾನು ಆರಂಭಿಸಿರುವ ಇನ್ನೊಂದು ಆನ್‌ಲೈನ್‌ ಅಭಿಯಾನಕ್ಕೂ 35ಸಾವಿರ ಮಂದಿ ಬೆಂಬಲ ಸೂಚಿಸಿದ್ದಾರೆ. ಸರ್ಕಾರದ ನಡೆಯ ವಿರುದ್ಧ ಬೆಂಗಳೂರಿನ ಪ್ರತಿಯೊಬ್ಬ ಪ್ರಜೆಯೂ ಧ್ವನಿ ಎತ್ತ ಬೇಕು.
-ವಿಜಯ್‌ ನಿಶಾಂತ್‌, ಪರಿಸರ ಕಾರ್ಯಕರ್ತ

**

‘ಸರ್ಕಾರದ ನಿರ್ಧಾರ ಆಘಾತ ತಂದಿದೆ’
ಸರ್ಕಾರದ ನಿರ್ಧಾರ ಆಘಾತ ತಂದಿದೆ. ಸಮೃದ್ಧವಾದ ವನ್ಯಜೀವಿ ಸಂಪತ್ತು ಇರುವ ಈ ಪರಿಸರ ಸೂಕ್ಷ್ಮ ಪ್ರದೇಶವನ್ನು ಉಳಿಸಿಕೊಳ್ಳುವ ಅಗತ್ಯದ ಬಗ್ಗೆ ಎಷ್ಟು ಸಾಕ್ಷ್ಯ ಒದಗಿಸಿದರೂ ಸರ್ಕಾರಗಳು ಸ್ಪಂದಿಸಿಯೇ ಇಲ್ಲ. ಒಂದೆಡೆ, ರಾಷ್ಟ್ರೀಯ ಉದ್ಯಾನದ ಆಸುಪಾಸಿನ ಗ್ರಾಮಗಳಲ್ಲಿ ಜನವಸತಿ ಹೆಚ್ಚಳವಾಗುತ್ತಿದ್ದರೆ ಹಾಗೂ ಇನ್ನೊಂದೆಡೆ ಲ್ಯಾಂಟಾನದಂತಹ ಆಕ್ರಮಣಕಾರಿ ಸಸ್ಯಗಳು ಇಲ್ಲಿನ ಪರಿಸರ ವ್ಯವಸ್ಥೆಯನ್ನು ಆತಂಕಕ್ಕೆ ದೂಡಿವೆ. ಇನ್ನು ಮುಂದೆ ಇಂತಹ ಅಪಾಯಗಳು ಮತ್ತಷ್ಟು ಹೆಚ್ಚಲಿವೆ.
-ಪ್ರಸನ್ನ ಕೆ.ವಿ., ಕೆನೆತ್‌ ಆ್ಯಂಡರ್ಸನ್‌ ನೇಚರ್‌ ಸೊಸೈಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.