ADVERTISEMENT

ಬೈಜೂಸ್ ಸಂಸ್ಥಾಪಕನ ಮೇಲೆ ಇ.ಡಿ ದಾಳಿ

ಫೆಮಾ ಉಲ್ಲಂಘಿಸಿ ₹28 ಸಾವಿರ ಕೋಟಿ ಎಫ್‌ಡಿಐ ಹೂಡಿಕೆ l 3 ಕಡೆ ಶೋಧ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2023, 5:35 IST
Last Updated 30 ಏಪ್ರಿಲ್ 2023, 5:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಡಿ ಬೈಜೂಸ್‌ ಕಂಪನಿಯ ಮಾಲೀಕ ರವೀಂದ್ರನ್‌ ಬೈಜು ಅವರ ಮನೆ ಮತ್ತು ಕಚೇರಿಗಳ ಮೇಲೆ ಶನಿವಾರ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.

ರವೀಂದ್ರನ್‌ ‘ಬೈಜೂಸ್‌’ ಹೆಸರಿನಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ಪೋರ್ಟಲ್‌ ನಡೆಸುತ್ತಿರುವ ಥಿಂಕ್‌ ಆ್ಯಂಡ್‌ ಲರ್ನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿದ್ದಾರೆ. ಅವರಿಗೆ ಸೇರಿದ ಎರಡು ವ್ಯವಹಾರ ಸ್ಥಳಗಳು ಮತ್ತು ಒಂದು ಮನೆಯಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಕಂಪನಿಯ ವಿರುದ್ಧ ಫೆಮಾ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಶೋಧ ಕಾರ್ಯಾಚರಣೆ ವೇಳೆ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಹಲವು ದಾಖಲೆಗಳು ಮತ್ತು ಡಿಜಿಟಲ್‌ ದತ್ತಾಂಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಬೈಜೂಸ್‌ 2011ರಿಂದ 2023ರ ಅವಧಿಯಲ್ಲಿ ₹ 28,000 ಕೋಟಿಯಷ್ಟು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಸ್ವೀಕರಿಸಿದೆ. ಸುಮಾರು ₹ 9,754 ಕೋಟಿಯಷ್ಟು ಮೊತ್ತವನ್ನು ಸಾಗರೋತ್ತರ ನೇರ ಹೂಡಿಕೆ ಹೆಸರಿನಲ್ಲಿ ವಿವಿಧ ದೇಶಗಳಲ್ಲಿ ಹೂಡಿಕೆ ಮಾಡಿದೆ. ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚದ ರೂಪದಲ್ಲಿ ₹ 944 ಕೋಟಿಯನ್ನು ವರ್ಗಾಯಿಸಿರುವುದು ಕಂಡುಬಂದಿದೆ’ ಎಂದು ಇ.ಡಿ ತಿಳಿಸಿದೆ.

ಕಂಪನಿಯು 2020–21ರ ಹಣಕಾಸು ಲೆಕ್ಕದ ವರದಿಯನ್ನು ಸಿದ್ಧ ಪಡಿಸಿಲ್ಲ. ಕಾನೂನು ಪ್ರಕಾರ ನಡೆಸಬೇಕಿದ್ದ ಲೆಕ್ಕ ಪರಿಶೋಧನಾ ಪ್ರಕ್ರಿಯೆಯನ್ನೂ ಪೂರ್ಣಗೊಳಿ ಸಿಲ್ಲ. ಹಣಕಾಸು ವಹಿವಾಟಿಗೆ ಸಂಬಂಧಿ ಸಿದಂತೆ ಕಂಪನಿ ನೀಡಿರುವ ಅಂಕಿ-ಅಂಶ ಗಳನ್ನು ಬ್ಯಾಂಕ್‌ಗಳ ದಾಖಲೆಗಳೊಂದಿಗೆ ಪರಿಶೀಲನೆ ನಡೆಸಲಾಗುವುದು ಎಂದೂ ತಿಳಿಸಿದೆ. ರವೀಂದ್ರನ್‌ ವಿರುದ್ಧ ಹಲವು ಮಂದಿ ಖಾಸಗಿ ವ್ಯಕ್ತಿಗಳು ದೂರು ಸಲ್ಲಿಸಿದ್ದರು. ಅವುಗಳನ್ನು ಆಧರಿಸಿ ತನಿಖೆ ಆರಂಭಿಸಲಾಗಿತ್ತು. ತನಿಖೆಯ ಅವಧಿಯಲ್ಲಿ ಅವರಿಗೆ ಹಲವು ಬಾರಿ ಸಮನ್ಸ್‌ ಜಾರಿಗೊಳಿಸಲಾಗಿತ್ತು. ತನಿಖೆ ಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಅವರು, ಒಮ್ಮೆಯೂ ತನಿಖಾಧಿಕಾರಿಗಳ ಎದುರು ಹಾಜರಾಗಿರಲಿಲ್ಲ ಎಂದು ಇ.ಡಿ ಹೇಳಿದೆ.

‘ತನಿಖೆಗೆ ಸಂಪೂರ್ಣ ಸಹಕಾರ’

‘ನಮ್ಮ ಕಾರ್ಯ ನಿರ್ವಹಣೆಯಲ್ಲಿ ಬದ್ಧತೆ ಮತ್ತು ನೈತಿಕತೆ ಕಾಯ್ದುಕೊಂಡಿದ್ದೇವೆ. ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ತನಿಖೆಗೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನೂ ಸಕಾಲಕ್ಕೆ ಒದಗಿಸುತ್ತೇವೆ. ಈ ಪ್ರಕರಣವು ಸಕಾಲಕ್ಕೆ ಮತ್ತು ತೃಪ್ತಿದಾಯಕ ರೀತಿಯಲ್ಲಿ ಇತ್ಯರ್ಥವಾಗಲಿದೆ ಎಂಬ ವಿಶ್ವಾಸ ನಮಗಿದೆ’ ಎಂದು ‘ಬೈಜೂಸ್‌’ ವಕ್ತಾರ ಪ್ರತಿಕ್ರಿಯಿಸಿದ್ದಾರೆ.

ಇ.ಡಿ ದಾಳಿ ಕುರಿತು ‘ಪಿಟಿಐ’ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಅವರು, ‘ಭಾರತ ಹಾಗೂ ಜಗತ್ತಿನಾ ದ್ಯಂತ ಇರುವ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಶೈಕ್ಷಣಿಕ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವುದಕ್ಕೆ ಸಂಸ್ಥೆ ಬದ್ಧವಾಗಿದೆ. ಭವಿಷ್ಯಕ್ಕಾಗಿ ವಿದ್ಯಾರ್ಥಿಗಳ ಕಲಿಕೆ ಮತ್ತು ಸಿದ್ಧತೆಯ ವಿಧಾನವನ್ನು ಪರಿವರ್ತಿಸುವುದಕ್ಕೆ ಆದ್ಯತೆ ನೀಡುವುದನ್ನು ಮುಂದುವರಿಸು ತ್ತೇವೆ’ ಎಂದು ತಿಳಿಸಿದ್ದಾರೆ.

ರವೀಂದ್ರನ್‌ ಮತ್ತು ಅವರ ಪತ್ನಿ ದಿವ್ಯಾ ಗೋಕುಲ್‌ನಾಥ್‌ ಬೈಜೂಸ್‌ ಕಂಪನಿಯನ್ನು ನಡೆಸುತ್ತಿದ್ದಾರೆ. ಕಂಪನಿಯು ₹ 2,200 ಕೋಟಿ ಮೌಲ್ಯ ಹೊಂದಿರುವುದಾಗಿ 2022ರ ಮಾರ್ಚ್‌ನಲ್ಲಿ ಘೋಷಿಸಿಕೊಂಡಿತ್ತು. ಕಂಪನಿಯು ವೆಚ್ಚ ಕಡಿತಕ್ಕಾಗಿ 2,500 ನೌಕರರನ್ನು ಕೈಬಿಟ್ಟು, 10,000 ಶಿಕ್ಷಕರನ್ನು ನೇಮಿಸಿಕೊಳ್ಳು ವುದಾಗಿ ಕಳೆದ ಅಕ್ಟೋಬರ್‌ನಲ್ಲಿ ಘೋಷಿಸಿತ್ತು.

2020–21ನೇ ಆರ್ಥಿಕ ವರ್ಷದಲ್ಲಿ ₹ 4,588 ಕೋಟಿ ನಷ್ಟ ಅನುಭವಿಸಿರುವುದಾಗಿ ಬೈಜೂಸ್‌ ಘೋಷಿಸಿಕೊಂಡಿತ್ತು. 2019–20ರಲ್ಲಿ ₹ 231.69 ಕೋಟಿ ನಷ್ಟ ಘೋಷಿಸಿತ್ತು. ಕಂಪನಿಯ ವರಮಾನವು 2019–20ರಲ್ಲಿ ₹ 2,511 ಕೋಟಿ ಇದ್ದು, 2020–21ರಲ್ಲಿ ₹ 2,428 ಕೋಟಿಗೆ ಕುಸಿದಿದೆ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.