
ಹಣ
ಬೆಂಗಳೂರು: ಮನುಷ್ಯರ ಸ್ವರೂಪದಲ್ಲಿ ಆಟವಾಡುವಂತೆ ರೂಪಿಸಿದ್ದ ಕೃತಕ ಬುದ್ಧಿಮತ್ತೆ ತಂತ್ರಾಂಶಗಳ ಮೂಲಕ ಆನ್‌ಲೈನ್ ಜೂಜು ನಡೆಸಿ, ಚಂದಾದಾರರಿಗೆ ಸಾವಿರಾರು ಕೋಟಿ ವಂಚಿಸಿದ್ದ ಪ್ರಕರಣದಲ್ಲಿ ವಿನ್‌ಝೋ ಗೇಮಿಂಗ್ ಕಂಪನಿಯ ಇಬ್ಬರು ಪ್ರವರ್ತಕರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಹತ್ತು ದಿನಗಳ ಕಸ್ಟಡಿಗೆ ಪಡೆದಿದೆ.
ಇ.ಡಿ ದೆಹಲಿ ಕೇಂದ್ರ ಕಚೇರಿಯು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಕಂಪನಿಯ ಪ್ರವರ್ತಕರಾದ ಸೌಮ್ಯಸಿಂಗ್ ರಾಥೋಡ್ ಮತ್ತು ಪವನ್ ನಂದಾ ಅವರನ್ನು ಬುಧವಾರ ವಿಚಾರಣೆಗೆ ಕರೆದಿತ್ತು. ಬೆಂಗಳೂರಿನ ಶಾಂತಿ ನಗರದಲ್ಲಿರುವ ಇ.ಡಿ ವಲಯ ಕಚೇರಿಯಲ್ಲಿ ರಾತ್ರಿಯವರೆಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಆನಂತರ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿ, ಒಂದು ದಿನದ ಅವಧಿಗೆ ಕಸ್ಟಡಿಗೆ ಪಡೆಯಲಾಗಿತ್ತು. ಗುರುವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹತ್ತು ದಿನಗಳವರೆಗೆ ಕಸ್ಟಡಿಗೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ 18ರಿಂದ 22ರವರೆಗೆ ಈ ಕಂಪನಿಯ ವಿವಿಧ ಕಚೇರಿಗಳಲ್ಲಿ ಶೋಧ ನಡೆಸಿದ್ದ ಇ.ಡಿಯು ಒಟ್ಟು ₹505 ಕೋಟಿ ಮೊತ್ತದ ಠೇವಣಿ, ಹೂಡಿಕೆಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.