ಬೆಂಗಳೂರು: ‘ಸಾಮಾಜಿಕ–ಶೈಕ್ಷಣಿಕ (ಜಾತಿವಾರು) ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ಈಡಿಗ ಎಂದೇ ನಮೂದಿಸಬೇಕು’ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಕರೆ ನೀಡಿದರು.
ಶ್ರೀ ನಾರಾಯಣಗುರು ವಿಚಾರ ವೇದಿಕೆ ಭಾನುವಾರ ಆಯೋಜಿಸಿದ್ದ ನಾರಾಯಣ ಗುರುಗಳ ಜಯಂತಿ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಈಡಿಗ ಸಮುದಾಯವು 26 ಪಂಗಡಗಳನ್ನು ಒಳಗೊಂಡಿದೆ. ಸಮೀಕ್ಷೆಯಲ್ಲಿ ಬಿಲ್ಲವ, ದೀವರು ಸೇರಿದಂತೆ ಎಲ್ಲರೂ ಈಡಿಗ ಎಂದೇ ನಮೂದಿಸಬೇಕು. ಇದರಿಂದ ನಮ್ಮ ಸಮುದಾಯದ ಜನಸಂಖ್ಯೆಯ ನಿಖರ ಮಾಹಿತಿ ಸಿಗಲಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ’ ಎಂದು ಹೇಳಿದರು.
ಶಾಸಕ ಕೆ. ಗೋಪಾಲಯ್ಯ ಮಾತನಾಡಿ, ‘ಪ್ರತಿಯೊಬ್ಬರೂ ನಾರಾಯಣ ಗುರುಗಳ ಆದರ್ಶ ಮತ್ತು ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾರಾಯಣ ಗುರುಗಳು ಯಾವುದೇ ಒಂದು ಸಮಾಜಕ್ಕೆ ಸೇರಿದವರಲ್ಲ. ಈಡಿಗ ಸಮುದಾಯದ ಅನೇಕ ಮಂದಿ ನಮ್ಮ ಭಾಗದಲ್ಲಿ ವಾಸವಾಗಿದ್ದು, ಅವರ ಎಲ್ಲ ಸಮಸ್ಯೆಗಳಿಗೂ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕಾರಿಪುರ ಸಹಸ್ರವಳಿ ಪ್ರಗತಿಪರ ರೈತ ದುರ್ಗಪ್ಪ ಅಂಗಡಿ, ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೋವಿಂದರಾಜು, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ವಿಖ್ಯಾತನಂದ ಸ್ವಾಮೀಜಿ, ನಿಪ್ಪಾಣಿಯ ಮಹಾಕಾಳಿ ಮಹಾಸಂಸ್ಥಾನ ಓಂ ಶಕ್ತಿ ಪೀಠದ ಅರುಣಾನಂದ ತೀರ್ಥ ಸ್ವಾಮೀಜಿ, ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ, ನಾರಾಯಣಗುರು ವಿಚಾರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಲೋಕೇಶ್ ಕೆ.ಎನ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.