ADVERTISEMENT

ವಿಚಾರಣೆ ಎದುರಿಸುತ್ತಿದ್ದ ಬಿಇಒ ಮತ್ತೆ ನೇಮಕ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:33 IST
Last Updated 27 ನವೆಂಬರ್ 2020, 21:33 IST

ಬೆಂಗಳೂರು: ಇಲಾಖಾ ವಿಚಾರಣೆ ಬಾಕಿಯಿದ್ದ ಅಧಿಕಾರಿಯೊಬ್ಬರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಮತ್ತೆ ಕ್ಷೇತ್ರ ಶಿಕ್ಷಣಾಧಿಕಾರಿಯನ್ನಾಗಿ (ಬಿಇಒ) ನೇಮಕ ಮಾಡಿದೆ.

ಬೆಂಗಳೂರು ದಕ್ಷಿಣದ (1) ಬಿಇಒ ಆಗಿ ಕೆ. ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ. 2016ರಲ್ಲಿ ಇದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್, ಅನುದಾನರಹಿತ ಶಾಲೆಗಳಿಗೆ ಆರ್‌ಟಿಇ ಬಾಕಿ ಪಾವತಿಗೆ ಸಂಬಂಧಿಸಿದಂತೆ ₹92 ಲಕ್ಷವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪವಿತ್ತು

ಪ್ರಾಥಮಿಕ ತನಿಖೆಯಿಂದ ಇದು ಸಾಬೀತುಗೊಂಡ ನಂತರ ಇಲಾಖೆಯು, ಅವರನ್ನು ಅಮಾನತುಗೊಳಿಸಿತ್ತು. ಕ್ರಿಮಿನಲ್‌ ಮೊಕದ್ದಮೆಯನ್ನೂ ದಾಖಲಿಸಲಾಗಿತ್ತು. ನಿವೃತ್ತ ನ್ಯಾಯಮೂರ್ತಿ ರಾಧಾಕೃಷ್ಣ ಹೊಳ್ಳ ನೇತೃತ್ವದಲ್ಲಿ ತನಿಖಾ ಸಮಿತಿಯನ್ನೂ ರಚಿಸಲಾಗಿತ್ತು. ನಾಲ್ಕು ವರ್ಷಗಳ ನಂತರ ಅದೇ ಹುದ್ದೆಗೆ ಪ್ರಕಾಶ್‌ ಅವರನ್ನು ಸರ್ಕಾರ ನೇಮಕ ಮಾಡಿದೆ. ಸರ್ಕಾರದ ಈ ನಡೆಯನ್ನು ಪ್ರಶ್ನಿಸಿರುವ ಆರ್‌ಟಿಇ ವಿದ್ಯಾರ್ಥಿಗಳು, ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಯೋಗಾನಂದ, ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ADVERTISEMENT

‘ಅಧಿಕಾರಿಯೊಬ್ಬರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರುವಾಗ ಕ್ಷೇತ್ರ ಶಿಕ್ಷಣಾಧಿಕಾರಿಯಂತಹ ಉನ್ನತ ಹುದ್ದೆಗೆ ಅವರನ್ನು ಹೇಗೆ ನೇಮಕ ಮಾಡಲಾಗುತ್ತದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ತಮ್ಮ ಆದೇಶವನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಸಾಕ್ಷ್ಯ ನಾಶಗೊಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂದು ಯೋಗಾನಂದ ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಇಲಾಖೆಯ ಅಧಿಕಾರಿಗಳು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.