ADVERTISEMENT

ಕೋರ್ಸ್‌ ಆಯ್ಕೆ ಇರಲಿ ಜಾಣತನ

ಕೃತಕ ಬುದ್ಧಿಮತ್ತೆ ಕ್ಷೇತ್ರ: 100 ಕೋಟಿ ಡಾಲರ್‌ನ ಮಾರುಕಟ್ಟೆ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:24 IST
Last Updated 25 ಮೇ 2019, 19:24 IST
ಎಂ.ಎನ್‌.ವಿದ್ಯಾಶಂಕರ್
ಎಂ.ಎನ್‌.ವಿದ್ಯಾಶಂಕರ್   

ಬೆಂಗಳೂರು: ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಯುವಜನರು ಉದ್ಯೋಗಕ್ಕೆ ಸಜ್ಜಾಗುತ್ತಿದ್ದಾರೆ. ಮಾರುಕಟ್ಟೆಯ ಅಗತ್ಯಗಳನ್ನು ತಿಳಿದುಕೊಂಡು ಜಾಣತನದಿಂದ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಉದ್ಯೋಗದ ಕನಸು ನನಸಾಗಲು ಸಾಧ್ಯ...

ನಿವೃತ್ತ ಐಎಎಸ್‌ ಅಧಿಕಾರಿ ಎಂ.ಎನ್‌.ವಿದ್ಯಾಶಂಕರ್‌ ಅವರು ಉನ್ನತ ಶಿಕ್ಷಣದ ಕೋರ್ಸ್‌ ಆಕಾಂಕ್ಷಿಗಳಿಗೆ ಹೇಳಿದ ಕಿವಿಮಾತು ಇದು.

ಶೈಕ್ಷಣಿಕ ಮೇಳವನ್ನು ಉದ್ಘಾಟಿಸಿ ಅವರು ಉಪಯುಕ್ತ ಮಾಹಿತಿ ನೀಡಿದರು.

ADVERTISEMENT

‘ಕಾಮರ್ಸ್‌ ವ್ಯಾಸಂಗ ಮಾಡಿದರೆ ಮುಂದಿನ 50 ವರ್ಷ ಕೆಲಸಕ್ಕೆ ಬರವೇ ಇಲ್ಲ. ದೇಶದಲ್ಲಿ ಸಿ.ಎ, ಕಾಸ್ಟ್‌ ಅಕೌಂಟೆಂಟ್‌, ಕಂಪನಿ ಸೆಕ್ರೆಟರಿಗಳ ಕೊರತೆ ತೀವ್ರವಾಗಿದೆ. ಕಂಟೆಂಟ್‌ ರೈಟಿಂಗ್‌ ಬರೆಯುವವರಿಗೆ ಬಹಳ ಬೇಡಿಕೆ ಇದೆ. ಗ್ರಾಮೀಣ ಮಾರುಕಟ್ಟೆ ಕ್ಷೇತ್ರ, ವಿದ್ಯುನ್ಮಾನ ವಾಣಿಜ್ಯ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಭಾರಿ ಉದ್ಯೋಗ ಸೃಷ್ಟಿಯಾಗಲಿದೆ. ಆರೋಗ್ಯ ಕಾಳಜಿ ಕ್ಷೇತ್ರ ಇಂದು ₹9 ಲಕ್ಷ ಕೋಟಿಯ ಮಾರುಕಟ್ಟೆ ಸೃಷ್ಟಿಸಿದೆ’ ಎಂದು ವಿದ್ಯಾಶಂಕರ್‌ ವಿವರಿಸಿದರು.

‘ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಅಪಾರ ಉದ್ಯೋಗ ಅವಕಾಶ ಇರುವುದನ್ನು ನೋಡಿಕೊಂಡು ಕೋರ್ಸ್‌ ಆಯ್ಕೆ ಮಾಡಬೇಕು. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮುಂದಿನ ವರ್ಷವೇ 100 ಕೋಟಿ ಡಾಲರ್‌ನ ಮಾರುಕಟ್ಟೆ ಸೃಷ್ಟಿಯಾಗಲಿದೆ. ಹೀಗಾಗಿ ಇದೇ ವಿಷಯದಲ್ಲಿ ಬಿ.ಇ, ಬಿ.ಟೆಕ್‌. ಕೋರ್ಸ್‌ ಇರುವ ಕಾಲೇಜು ಆಯ್ಕೆ ಮಾಡಿದರೆ ಉತ್ತಮ. ಬ್ಲಾಕ್‌ ಚೈನ್‌ ಟೆಕ್ನಾಲಜಿ, ಸ್ಮಾರ್ಟ್‌ ಸಿಟಿ, ಸ್ಮಾರ್ಟ್‌ ಫೋನ್‌, ಬಿಗ್‌ ಡಾಟ, ಸೈಬರ್‌ ಸೆಕ್ಯುರಿಟಿ, ಎಥಿಕಲ್ ಹ್ಯಾಕಿಂಗ್‌ನಂತಹ ಕ್ಷೇತ್ರಗಳಲ್ಲಿ ಭಾರಿ ಅವಕಾಶ ಇದ್ದು, ಇದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು’ ಎಂದರು.

‘ಡ್ರೋನ್‌ ಇಂದು ವಿಭಿನ್ನ ರೀತಿಯ ಕೆಲಸಗಳಿಗೆ ಬಳಕೆ ಆಗುತ್ತಿದೆ. ಆಟೊನಮಸ್‌ ವೆಹಿಕಲ್‌ ಕ್ಷೇತ್ರದಲ್ಲಂತೂ ಎಷ್ಟು ಅವಕಾಶ ಇದೆ ಎಂದು ವಿವರಿಸುವುದು ಕಷ್ಟ. ರೋಬೊಟ್‌ ಅಭಿವೃದ್ಧಿ ಮಾಡುವವರಿಗೂ ಸಾಕಷ್ಟು ಬೇಡಿಕೆ ಸೃಷ್ಟಿಯಾಗುತ್ತಿದೆ. ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸುವ ಯುವ, ಉತ್ಸಾಹಿ ಉದ್ಯಮಿಗಳಿಗೆ ಇಂದು ಹಣಕಾಸಿನ ಕೊರತೆಯೇ ಇಲ್ಲ. ಐ ಬ್ರೆಸ್ಟ್‌ ಟೆಸ್ಟ್‌, ಸಂಕೇತ್‌ ಇಸಿಜಿಗಳಂತಹ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕಡಿಮೆ ವೆಚ್ಚದ ಯಂತ್ರಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ವರ್ಣಿಸಲು ಅಸಾಧ್ಯ. ಸ್ಟಾರ್ಟ್‌ಅಪ್‌ಗಳಿಂದ ಇಂತಹ ಕೌಶಲ, ತಾಂತ್ರಿಕತೆ ಹೊರಹೊಮ್ಮುವಂತಾದರೆ ಭಾರತ ಮುಂದಿನ ದಿನಗಳಲ್ಲಿ ಯಾರಿಗೂ ಅವಲಂಬಿಸಿ ಇರಬೇಕಾಗಿಲ್ಲ. ಸ್ಟಾರ್ಟ್‌ಅಪ್‌ಗಳಿಗೆ ಬೇಕಿರುವುದು ಮನಃಸ್ಥಿತಿಯೇ ಹೊರತು ಬೇರೇನೂ ಅಲ್ಲ’ ಎಂದು ವಿದ್ಯಾಶಂಕರ್‌ ಕಿವಿಮಾತು ಹೇಳಿದರು.

ಕಾಮೆಡ್–ಕೆ ವಿಶೇಷ ಅಧಿಕಾರಿ ಡಾ.ಶಾಂತಾರಾಂ ನಾಯಕ್‌ ಅವರು ಕಾಮೆಡ್‌–ಕೆ ಪರೀಕ್ಷೆ ಕುರಿತಂತೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಾರ್ವಜನಿಕ ಸಂಪರ್ಕ ಅಧಿಕಾರಿ ಎ.ಎಸ್.ರವಿ ಸಿಇಟಿ ಕುರಿತಂತೆ ಮಾಹಿತಿ ನೀಡಿದರು.

ಸಿಎಂಆರ್‌, ಗಾರ್ಡನ್‌ ಸಿಟಿ, ಗೀತಂ, ರೇವಾ, ಎಂ.ಎಸ್‌.ರಾಮಯ್ಯ, ದಯಾನಂದ ಸಾಗರ್, ಅಲಯನ್ಸ್‌ ವಿಶ್ವವಿದ್ಯಾಲಯ ಸಹಿತ ಸುಮಾರು 65 ಶಿಕ್ಷಣ ಸಂಸ್ಥೆಗಳ ಮಳಿಗೆಗಳಿಂದ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಉಪಯುಕ್ತ ಮಾಹಿತಿ ಲಭಿಸಿತು. ಆಚಾರ್ಯ, ಕೇಂಬ್ರಿಜ್‌, ಈಸ್ಟ್‌ ಪಾಯಿಂಟ್‌, ಪಿಇಎಸ್‌, ಸಂಭ್ರಮ್‌, ಯುನಿವರ್ಸಲ್‌ ಸಹಿತ ಹಲವು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಸಹ ಮಾಹಿತಿ ನೀಡಿದರು.

ಭಾನುವಾರ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ‘ಜ್ಞಾನದೇಗುಲ’ ನಡೆಯಲಿದ್ದು, ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಸಿಇಟಿ, ಕಾಮೆಡ್‌–ಕೆ ಬಗ್ಗೆ ತಜ್ಞರಿಂದಮಾಹಿತಿ ನೀಡಲಾಗುವುದು. ವಿವಿಧ ಕಾಲೇಜುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಕ್ಕೂ ಅವಕಾಶ ಇದೆ.

‘ಎಲೆಕ್ಟ್ರಾನಿಕ್ಸ್‌ – ನಮ್ಮಲ್ಲೇ ಉತ್ಪಾದನೆ ಅಗತ್ಯ’

ಭಾರತವು ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವುದು ಕಚ್ಚಾ ತೈಲವನ್ನು. ಅತಿ ಹೆಚ್ಚು ಆಮದಾಗುವ ಸರಕುಗಳ ಪಟ್ಟಿಯಲ್ಲಿ ಚಿನ್ನ ಎರಡನೇ ಸ್ಥಾನದಲ್ಲಿ ಇತ್ತು. ಎರಡು ತಿಂಗಳಿಂದೀಚೆಗೆ ಎಲೆಕ್ಟ್ರಾನಿಕ್ಸ್‌ ಸಾಮಗ್ರಿ ಆ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ನಮ್ಮ ಬೇಡಿಕೆ ಇದೇ ರೀತಿ ಮುಂದುವರಿದರೆ 2023ರಲ್ಲಿ ತೈಲವನ್ನೂ ಮೀರಿ ಎಲೆಕ್ಟ್ರಾನಿಕ್ಸ್‌ ಸಾಮಗ್ರಿಗಳ ಆಮದಿಗೆ ನಾವು ಅತಿ ಹೆಚ್ಚು ಪಾವತಿ ಮಾಡುವ ಸಂದರ್ಭ ಬರಲಿದೆ. ಹೀಗಾಗಿ ಎಲೆಕ್ಟ್ರಾನಿಕ್ಸ್‌ ಸಾಮಗ್ರಿಗಳನ್ನು ನಮ್ಮಲ್ಲೇ ಉತ್ಪಾದಿಸಿದ್ದೇ ಆದರೆ ಭಾರಿ ಉದ್ಯೋಗ ಸೃಷ್ಟಿಯ ಜತೆಗೆ ವಿದೇಶಿ ವಿನಿಯಮವನ್ನು ದೊಡ್ಡ ಪ್ರಮಾಣದಲ್ಲಿ ಇಳಿಸಬಹುದು.

ವಿದ್ಯಾರ್ಥಿಗಳು ಇಂತಹ ಸೂಕ್ಷ್ಮಗಳನ್ನು ತಿಳಿದುಕೊಂಡು ತಮ್ಮ ಕೋರ್ಸ್‌ ಆಯ್ಕೆ ಮಾಡಬೇಕು. ಸ್ವಂತವಾಗಿ ಉದ್ಯಮ ಸ್ಥಾಪನೆಯತ್ತ ಮನಸ್ಸು ಮಾಡಬೇಕು ಎಂದು ಎಂ.ಎನ್‌.ವಿದ್ಯಾಶಂಕರ್ ಹೇಳಿದರು.

ಸೈಬ‌ರ್‌ ಸುರಕ್ಷೆ–ಭಾರಿ ಸಿಬ್ಬಂದಿ ಕೊರತೆ

ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅದನ್ನು ತಡೆಗಟ್ಟಲು ಕೈಗೊಳ್ಳುವ ಕ್ರಮಗಳಿಗೂ ಬಹಳ ಬೇಡಿಕೆ ಇದೆ. ಅಮೆರಿಕದಲ್ಲಿ 2.09 ಲಕ್ಷ ಸೈಬರ್ ಸೆಕ್ಯುರಿಟಿ ಸಿಬ್ಬಂದಿಯ ಕೊರತೆ ಇದೆ. ಮುಂದಿನ ವರ್ಷ ಒಟ್ಟಾರೆ 60 ಲಕ್ಷ ಎಥಿಕಲ್‌ ಹ್ಯಾಕರ್‌ಗಳ ಅಗತ್ಯ ಎದುರಾಗಲಿದೆ. 10 ಲಕ್ಷ ಸೈಬರ್‌ ಸೆಕ್ಯುರಿಟಿ ಅಧಿಕಾರಿಗಳು ಬೇಕಾಗುತ್ತಾರೆ. ಇಂತಹ ಸಣ್ಣ ಸಣ್ಣ ವಿಚಾರಗಳನ್ನು ಮನವರಿಕೆ ಮಾಡಿಕೊಂಡು ವಿದ್ಯಾರ್ಥಿಗಳು ಅಂತಹ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾಶಂಕರ್ ಕಿವಿಮಾತು ಹೇಳಿದರು.

**

ರೋಬೊಟ್‌ನಿಂದ ಉದ್ಯೋಗ ಖಂಡಿತ ಕಡಿಮೆಯಾಗಿಲ್ಲ. ಜನರಿಗೆ ಅನುಕೂಲ ಹೆಚ್ಚಾಗಿದೆ, ಇನ್ನಷ್ಟು ಉದ್ಯೋಗ ಸೃಷ್ಟಿಯಾಗಿದೆ
- ಎಂ.ಎನ್‌.ವಿದ್ಯಾಶಂಕರ್‌, ಹಿರಿಯ ಐಎಎಸ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.