ADVERTISEMENT

ಆನ್‌ಲೈನ್ ತರಗತಿ: ಚೈತನ್ಯ ಟೆಕ್ನೋಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 26 ಮೇ 2021, 21:48 IST
Last Updated 26 ಮೇ 2021, 21:48 IST

ಬೆಂಗಳೂರು: ಶಿಕ್ಷಣ ಇಲಾಖೆಯ ಅನುಮತಿ ಇಲ್ಲದಿದ್ದರೂ ಆನ್‌ಲೈನ್‌ನಲ್ಲಿ ತರಗತಿ ಆರಂಭಿಸಿ ವಿದ್ಯಾರ್ಥಿಗಳ ಪೋಷಕರಿಂದ ಶುಲ್ಕ ವಸೂಲು ಮಾಡುತ್ತಿರುವ ಆರೋಪದ ಬಗ್ಗೆ ಮೂರು ದಿನಗಳ ಒಳಗೆ ವಿವರಣೆ ನೀಡುವಂತೆ ಮಹಾಲಕ್ಷ್ಮಿಪುರ ಮತ್ತು ರಾಜಾಜಿನಗರದಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಮೇಶ್‌ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ.

ಶ್ರೀ ಚೈತನ್ಯ ಟೆಕ್ನೋ ಶಾಲೆ ಆನ್‌ಲೈನ್‌ನಲ್ಲಿ ತರಗತಿ ನಡೆಸುತ್ತಿರುವ ಬಗ್ಗೆ ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ಇದೇ 25ರಂದು ದೂರು ನೀಡಿತ್ತು.

‘2021–22ನೇ ಸಾಲಿನಲ್ಲಿ ಶಾಲೆಗಳನ್ನು ನಡೆಸಲು ಯಾವುದೇ ವೇಳಾಪಟ್ಟಿ ನೀಡಿಲ್ಲ. ಅಲ್ಲದೆ, ಹಿಂದಿನ ಸಾಲಿನ ಶುಲ್ಕ ವಸೂಲಿಗೆ ಸಂಬಂಧಿಸಿದಂತೆಯೂ ಯಾವುದೇ ನಿರ್ದೇಶನ ನೀಡಿಲ್ಲ. ಇಲಾಖೆಯ ಆದೇಶಕ್ಕೆ ವಿರುದ್ಧವಾಗಿ ಆನ್‌ಲೈನ್ ಮೂಲಕ ತರಗತಿ ನಡೆಸುವುದು, ಕೆಲವು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗೆ ಅವಕಾಶ ನೀಡದೆ ತಾರತಮ್ಯ ಎಸಗುತ್ತಿರುವುದು, ವಿದ್ಯಾರ್ಥಿಗಳ ಪೋಷಕರಿಂದ ಹಿಂದಿನ ಸಾಲಿನ ಮತ್ತು ಈ ಸಾಲಿನ ಶುಲ್ಕ ಪಾವತಿಗೆ ಒತ್ತಾಯಿಸುವುದು ಆರ್‌ಟಿಇ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ, ಈ ಬಗ್ಗೆ ಪೂರಕ ದಾಖಲೆಗಳೊಂದಿಗೆ ವಿವರಣೆ ನೀಡಬೇಕು. ಇಲ್ಲದಿದ್ದರೆ ಆರ್‌ಟಿಇ ಕಾಯ್ದೆಯಡಿ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು’ ಎಂದೂ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.