ಬೆಂಗಳೂರು: ‘ಆಂಟಿ ಪ್ರೀತ್ಸೆ’ ಸಿನಿಮಾದ ನಿರ್ಮಾಪಕರಾಗಿರುವ ಶಾಸಕ ಮುನಿರತ್ನ ಅವರು ಮೊಟ್ಟೆ ಎಸೆತ ಪ್ರಕರಣದಲ್ಲಿ ನಿರ್ಮಾಪಕ, ನಿರ್ದೇಶಕ ಮತ್ತು ನಟ ಕೂಡ ಆಗಿದ್ದಾರೆ. ಮೊಟ್ಟೆ ಎಸೆತ ರಾಜಕೀಯ ನಾಟಕ’ ಎಂದು ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣ ಸ್ವಾಮಿ ದೂರಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಒಕ್ಕಲಿಗ ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ, ದಲಿತ ಸಮುದಾಯವನ್ನು ನಿಂದನೆ ಮಾಡಿದ ಪ್ರಕರಣದ ಆಡಿಯೊದಲ್ಲಿ ಇರುವುದು ಮುನಿರತ್ನ ಅವರದ್ದೇ ಧ್ವನಿ ಎಂದು ಸಾಬೀತಾಗಿದೆ. ಇದರಿಂದ ಬಂಧನದ ಭೀತಿ ಎದುರಾಗಿದೆ. ಜೊತೆಗೆ ಮತದಾರರ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ. ಒಳ್ಳೆಯವ ಎಂದು ಸಾಬೀತು ಮಾಡಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ತನ್ನ ಮೇಲೆ ಮೊಟ್ಟೆ ಹಾಕಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಮೊಟ್ಟೆ ಎಸೆತ ಆಗುವ ಮೊದಲೇ ಆ್ಯಸಿಡ್ ದಾಳಿ ಎಂದು ಕೂಗಿರುವುದು, ದಲಿತ ಯುವಕರೊಬ್ಬರ ಕಾರನ್ನು ಪುಟಿಗಟ್ಟಿ ಶಾಸಕರ ಕಾರಿನ ಮೇಲೆ ದಾಳಿ ಎಂದು ಹೇಳಿಕೊಂಡಿರುವುದು ಮುನಿರತ್ನ ಮತ್ತು ತಂಡದ ನಾಟಕಕ್ಕೆ ಸಾಕ್ಷಿ. ಈ ಪ್ರಕರಣದಲ್ಲಿ ಹಲವರ ವಿರುದ್ಧ ಸುಳ್ಳು ದೂರು ದಾಖಲಾಗಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.