ಬೆಂಗಳೂರು: ರಂಜಾನ್ ಮಾಸಾಚರಣೆಯ ಅಂತಿಮ ದಿನವಾದ ಸೋಮವಾರ ನಗರದಲ್ಲಿ ಮುಸ್ಲಿಮರು ‘ಈದ್ ಉಲ್ ಫಿತ್ರ್’ ಹಬ್ಬವನ್ನು ಕಪ್ಪು ಪಟ್ಟಿ ಧರಿಸಿ ಆಚರಿಸಿದರು. ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಜನರು ಪ್ರಾರ್ಥನೆಯಲ್ಲಿ ಭಾಗಿಯಾದರು.
ಒಂದು ತಿಂಗಳ ಉಪವಾಸ ಆಚರಿಸಿದ್ದ ಮುಸ್ಲಿಮರು, ಚಂದ್ರದರ್ಶನದ ಬಳಿಕ ಆಹಾರ ಸ್ವೀಕರಿಸಿ ವ್ರತ ಅಂತ್ಯಗೊಳಿಸಿದರು. ಹೊಸ ಬಟ್ಟೆ ಧರಿಸಿ ಸಮೀಪದ ಈದ್ಗಾ ಮೈದಾನಗಳು, ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು.
ಲೋಕ ಕಲ್ಯಾಣಕ್ಕೆ ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸಿದ ಧರ್ಮ ಗುರುಗಳು, ಹಬ್ಬದ ಸಂದೇಶ ನೀಡಿದರು. ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು.
ಚಾಮರಾಜಪೇಟೆಯ ಈದ್ಗಾ ಮೈದಾನ, ವಿಲ್ಸನ್ ಗಾರ್ಡನ್‌ನ ರೆಡ್ ಫೋರ್ಟ್ ಮೈದಾನ, ಶಿವಾಜಿನಗರ, ಜೆ.ಪಿ.ಪಾರ್ಕ್ ಆಟದ ಮೈದಾನ ಹಾಗೂ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಜಾಮಿಯಾ ಮಸೀದಿಯ ಮೌಲಾನಾ ಮಕ್ಸೂದ್ ಇಮ್ರಾನ್ ನೇತೃತ್ವದಲ್ಲಿ ನಡೆದ ಪ್ರಾರ್ಥನೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್, ಅವರ ಪುತ್ರ ಝೈದ್ ಖಾನ್ ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು.
ಸಾಮೂಹಿಕ ಪ್ರಾರ್ಥನೆಯ ಕಾರಣ ವಿವಿಧೆಡೆ ವಾಹನಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು. ನಗರದ ಮಸೀದಿ, ದರ್ಗಾ ಹಾಗೂ ಮದರಸಾಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ವಿದ್ಯುತ್ ಬೆಳಕಿನಲ್ಲಿ ಮಸೀದಿಗಳು ಕಂಗೊಳಿಸಿದವು.
ನಗರದ ಮೈಸೂರು ರಸ್ತೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಬಳಿಕ ಕುರಾನ್ ಪಠಣ ನಡೆಯಿತು.
ಒಂದು ತಿಂಗಳು ಉಪವಾಸ ಮಾಡಿದ್ದ ಅವರು ತಮ್ಮ ಗಳಿಕೆಯಲ್ಲಿ ಬಡವರಿಗೆ ದಾನ ಮಾಡುವ ಸಂಪ್ರದಾಯವನ್ನು ಪಾಲಿಸಿದರು. ಬಡವರಿಗೆ ಹಣ್ಣುಹಂಪಲು, ಧಾನ್ಯಗಳನ್ನು ದಾನ ನೀಡಲಾಯಿತು.
ಮನೆಯಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಎಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಸಂಬಂಧಿಕರು ಹಾಗೂ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ, ಹಬ್ಬದ ಶುಭಾಶಯ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.