ADVERTISEMENT

ಆನ್‌ಲೈನ್‌ ವಂಚನೆ: ಎಂಟು ಮಂದಿ ಸೆರೆ

19 ಲ್ಯಾಪ್​ಟಾಪ್‌ಗಳು, 40 ಮೊಬೈಲ್‌, 11 ಪೆನ್‌ಡ್ರೈವ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 14:47 IST
Last Updated 7 ಅಕ್ಟೋಬರ್ 2025, 14:47 IST
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳು 
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳು    

ಬೆಂಗಳೂರು: ಆನ್‌ಲೈನ್‌ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚನೆ ನಡೆಸುತ್ತಿದ್ದ ಜಾಲವನ್ನು ನೈರುತ್ಯ ವಿಭಾಗದ ಕೆಂಗೇರಿ ಠಾಣೆಯ ಪೊಲೀಸರು ಭೇದಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಒಟ್ಟು ಏಳು ಸ್ಥಳಗಳ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ಪೊಲೀಸರು, ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 318(4), 319(2), 3(5) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 66(ಸಿ) ಹಾಗೂ 66(ಡಿ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ದಾಳಿ ವೇಳೆ ಸಿಕ್ಕಿದ 19 ಲ್ಯಾಪ್​ಟಾಪ್‌ಗಳು, 40 ಮೊಬೈಲ್‌ ಫೋನ್‌, 11 ಪೆನ್‌ಡ್ರೈವ್, 42 ಸಿಮ್‌ಕಾರ್ಡ್, 4 ಐ–ಪ್ಯಾಡ್, ಎರಡು ಹಾರ್ಡ್ ಡಿಸ್ಕ್, 5 ಸಿಪಿಯು, 13 ಮುದ್ರೆಗಳು, 10 ಮೆಮೊರಿ ಕಾರ್ಡ್, ವಿದೇಶಿ ಕರೆನ್ಸಿ, ಕರೆನ್ಸಿ ಕೌಟಿಂಗ್ ಮಷಿನ್, ₹6 ಕೋಟಿ ಮೌಲ್ಯದ ಸ್ಥಿರಾಸ್ತಿ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ಬಂಧಿತರನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟೆಲಿಗ್ರಾಮ್ ಮೂಲಕ ವಿವಿಧ ರಾಜ್ಯಗಳಲ್ಲಿ ನೆಲಸಿರುವ ಜನರನ್ನು ಸಂಪರ್ಕಿಸುತ್ತಿದ್ದರು. ಆನ್‌ಲೈನ್‌ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರಲಿದೆ ಎಂಬುದಾಗಿ ಆಮಿಷ ಒಡ್ಡುತ್ತಿದ್ದರು. ನೂರಾರು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಎಸಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಸಹಚರನೇ ನೀಡಿದ್ದ ಮಾಹಿತಿ: ‘ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಹೂಡಿಕೆಯಿಂದ ಬಂದ ಲಾಭವನ್ನು ಬಂಧಿತರು ತಮ್ಮ ಸಹಚರನಿಗೆ ನೀಡಿರಲಿಲ್ಲ. ಇದೇ ಕಾರಣಕ್ಕೆ ಎರಡು ತಂಡಗಳ ನಡುವೆ ವೈಷಮ್ಯ ಉಂಟಾಗಿತ್ತು. ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ನಡೆಸುತ್ತಿದ್ದ ಬಗ್ಗೆ ಸಹಚರನೇ ಪೊಲೀಸರಿಗೆ ಮಾಹಿತಿ ನೀಡಿದ್ದ. ಮಾಹಿತಿ ಆಧರಿಸಿ ಏಳು ಸ್ಥಳಗಳ ಮೇಲೆ ಸೋಮವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದರು’ ಎಂದು ಪೊಲೀಸರು ಹೇಳಿದರು.

ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ ಪೊಲೀಸರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.