
ಬೆಂಗಳೂರು: ‘ಅರಣ್ಯ ಮತ್ತು ವನ್ಯಜೀವಿಗಳು ಸಮಾಜದ ಭಾಗವಾಗಿದ್ದು, ನೈಸರ್ಗಿಕ ಪರಿಸರ ವ್ಯವಸ್ಥೆಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು’ ಎಂದು ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಅಭಿಪ್ರಾಯಪಟ್ಟರು.
ದಿ ಸಿಎಂಆರ್ ಜ್ಞಾನಧಾರಾ ಟ್ರಸ್ಟ್, ಏಕ್ಯಾ ಆಡಳಿತ ಮಂಡಳಿ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಏಕ್ಯಾ ವನ ಮತ್ತು ಏಕ್ಯಾ ‘ಫೈಂಡ್’ ಉತ್ಸವ ಉದ್ಘಾಟಿಸಿ, ಮಾತನಾಡಿದರು.
‘ಏಕ್ಯಾ ಶಾಲೆಗಳ ನಿರ್ಮಾಣದ ಮೂಲಕ ಪರಿಸರ ವಿಜ್ಞಾನದ ಮಡಿಲಿನಲ್ಲಿ ಮಕ್ಕಳ ಕಲಿಕೆಗೆ ಮುಂದಾಗಿರುವುದು ದೇಶಕ್ಕೆ ಮಾದರಿ’ ಎಂದರು.
ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ, ‘ಈ ಭೂಮಿಯನ್ನು ಸಂರಕ್ಷಿಸುವ ಮತ್ತು ಕಾಳಜಿಯಿಂದ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಮಕ್ಕಳ ಮೇಲಿದೆ. ನಾವು ಅವರ ಕುತೂಹಲ ಮತ್ತು ಪ್ರಕೃತಿಯ ಮೇಲಿನ ಪ್ರೀತಿಯನ್ನು ಪೋಷಿಸಿದರೆ, ಅವರು ನಮ್ಮ ಜಗತ್ತಿಗೆ ಅಗತ್ಯವಿರುವ ರಕ್ಷಕರಾಗುತ್ತಾರೆ’ ಎಂದು ಹೇಳಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಸ್ವಜಿತ್ ಮಿಶ್ರಾ, ‘ಪ್ರಕೃತಿಯ ಜತೆಗಿನ ಕಲಿಕೆಯ ಏಕ್ಯಾ ವನ ಶಾಲೆ ಪರಿಕಲ್ಪನೆ ವಿಶಿಷ್ಟವಾಗಿದ್ದು, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಕಲಿಕೆಯ ಜತೆ ವನ್ಯಜೀವಿ, ಪರಿಸರ ವಿಜ್ಞಾನದ ಭಾಗವಾಗಲು ಪ್ರೇರೇಪಿಸುತ್ತದೆ’ ಎಂದರು.
ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ‘ಪ್ರಕೃತಿಯ ಮಡಿಲಿನಲ್ಲಿ ಮಕ್ಕಳು ಕಲಿಯಬೇಕು. ಆ ಮೂಲಕ ಮಕ್ಕಳು ಪರಿಸರದ ಭಾಗವಾಗಬೇಕು. ಇದೇ ಏಕ್ಯಾ ವನ ಶಾಲೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ವಿಭಿನ್ನ ಪರಿಸರ ವಿಜ್ಞಾನ ಕಲಿಕೆಯ ವಾತಾವರಣದಲ್ಲಿ ಏಕ್ಯಾ ವನ ಶಾಲೆ ನಿರ್ಮಾಣವಾಗಲಿದ್ದು, ದೇಶದಲ್ಲಿಯೇ ವಿಭಿನ್ನ ಮತ್ತು ಮಾದರಿ ಶಾಲೆಯಾಗಿದೆ’ ಎಂದು ಹೇಳಿದರು.
ಸಿಎಂಆರ್ ಜ್ಞಾನಧಾರ ಟ್ರಸ್ಟ್ ಅಧ್ಯಕ್ಷೆ ಸಬಿತಾ ರಾಮಮೂರ್ತಿ, ಕಾರ್ಯದರ್ಶಿ ಕೆ.ಸಿ.ಜಗನ್ನಾಥ ರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.