ADVERTISEMENT

ಮತದಾರರ ಸೇರ್ಪಡೆ ಕಾರ್ಯ ಚುರುಕುಗೊಳಿಸಿ: ಆಯೋಗ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 22:02 IST
Last Updated 3 ಜನವರಿ 2023, 22:02 IST
   

ಬೆಂಗಳೂರು: ಮತದಾರರ ಪಟ್ಟಿಗೆ ಅರ್ಹ ಮತದಾರರ ಹೆಸರು ಸೇರಿಸುವ ಕಾರ್ಯ ಚುರುಕುಗೊಳಿಸಬೇಕು. ಪರಿಷ್ಕೃತ ಪಟ್ಟಿಯಲ್ಲಿ ಕನಿಷ್ಠ 3 ಲಕ್ಷ ಹೊಸ ಮತದಾರರು ಸೇರ್ಪಡೆಯಾಗುವಂತೆ ಕ್ರಮವಹಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ಉಪಚುನಾವಣಾ ಆಯುಕ್ತ ಅಜಯ್‌ ಭಾದೂ ಸೂಚನೆ ನೀಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ತಯಾರಿ ಕಾರ್ಯಗಳ ಪರಿಶೀಲನೆ ನಡೆಸಲು ಸೋಮವಾರ ನಗರಕ್ಕೆ ಬಂದಿದ್ದ ಅವರು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಮಂಗಳವಾರ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳ ಜತೆಗೆ ಅವರು ವರ್ಚುವಲ್‌ ಆಗಿ ಸಭೆ ನಡೆಸಿದರು.

ಇದೇ ತಿಂಗಳು ಪ್ರಕಟವಾಗುವ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಮುಖ್ಯವಾಗಿ ಅಂತಿಮ ಮತದಾರರ ಪಟ್ಟಿ ತಯಾರಿಕೆಯಲ್ಲಿ ಮೃತಪಟ್ಟವರ ಹೆಸರು ತೆಗೆದುಹಾಕುವುದು, ವಿಳಾಸ ಬದಲಾದವರು, ಹೆಸರುಗಳ ವರ್ಗಾವಣೆ, ಮತ್ತು ಹೊಸ, ಯುವ ಮತದಾರರ ಹೆಸರುಗಳ ಸೇರ್ಪಡೆಗೆ ಸಂಬಂಧಿಸಿ ಆಯೋಗದ ಮಾರ್ಗ
ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಮತದಾರರ ಪಟ್ಟಿಯಲ್ಲಿ ಸಾರ್ವಜ ನಿಕರ ಮಾಹಿತಿ ಸರಿಯಾಗಿರಬೇಕು. ಯಾವುದೇ ಕಾರಣಕ್ಕೂ ಪಟ್ಟಿಯಲ್ಲಿರುವ ಅರ್ಹ ಮತದಾರರ ಹೆಸರುಗಳನ್ನು ಕೈಬಿಡದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲಾ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಪ್ರತಿ ಮನೆಗೂ ಭೇಟಿ ನೀಡಿ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿರುವ ಬಗ್ಗೆ ನಿಗಾವಹಿಸಬೇಕು ಎಂದರು.

ಅಲ್ಲದೇ, ಅಂತಿಮ ಮತದಾರರ ಪಟ್ಟಿಯ ತಯಾರಿಯಲ್ಲಿ ತಮ್ಮ ಜಿಲ್ಲಾ ವ್ಯಾಪ್ತಿಗಳ ವಿಧಾನಸಭಾ ಕ್ಷೇತ್ರ
ಗಳಲ್ಲಿ ಅತ್ಯಂತ ಕಡಿಮೆ ಸೇರ್ಪಡೆಗೊಂಡಿರುವ ಮತ್ತು ತೆಗೆದುಹಾಕಿರುವ 10 ಮತ ಕೇಂದ್ರಗಳನ್ನು ಗುರುತಿಸಿ ಅವುಗಳಿಗೆ ಸಕಾರಣ ಗುರುತಿಸಿ ಸರಿ ಮಾಡುವಂತೆಯೂ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.