ADVERTISEMENT

ಬಿಬಿಎಂಪಿ ಚುನಾವಣೆ: ಮತದಾರರ ಪಟ್ಟಿ ಪರಿಷ್ಕರಣೆ, ಸಿದ್ಧತೆ ಶುರು

ಎಂಟೂ ವಲಯಗಳ ಅಧಿಕಾರಿಗಳಿಗೆ, ಸಿಬ್ಬಂದಿಗೆ ತರಬೇತಿ; ನ.30ರ ಒಳಗೆ ಸಿದ್ಧವಾಗಲಿದೆ ಅಂತಿಮ ಪಟ್ಟಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 19:20 IST
Last Updated 21 ಆಗಸ್ಟ್ 2020, 19:20 IST
   

ಬೆಂಗಳೂರು: ಬಿಬಿಎಂಪಿ ಚುನಾವಣೆ ಸಂಬಂಧ 198 ವಾರ್ಡ್‌ಗಳಲ್ಲಿ 188 ವಾರ್ಡ್‌ಗಳ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಶುಕ್ರವಾರ ತರಬೇತಿ ನೀಡಲಾಯಿತು.

ಯಾವುದೇ ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ಕಡೆ ಸೇರ್ಪಡೆಯಾಗದಂತೆ, ಮತದಾರರ ಪಟ್ಟಿಯಲ್ಲಿ ಲೋಪದೋಷಗಳು ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲು ವಹಿಸಬೇಕಾದ ಎಚ್ಚರಿಕೆ ಬಗ್ಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹಾಗೂ ಸಹಾಯಕ ಆಯುಕ್ತರಾದ (ಚುನಾವಣೆ) ವೈ.ಕವಿತಾ ಮತ್ತು ಹಿರಿಯ ಅಧಿಕಾರಿಗಳು ತರಬೇತಿ ನೀಡಿದರು.

2020ರ ಫೆ.7ರಂದು ಪ್ರಕಟಿಸಿರುವ ಮತದಾರರ ಪಟ್ಟಿಯ ಆಧಾರದಲ್ಲೇ ವಾರ್ಡ್‌ವಾರು ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತದೆ. ಮರುವಿಂಗಡಣೆ ಬಳಿಕ ಯಾವ ವಾರ್ಡ್‌ನಲ್ಲಿ ಯಾವ ಮತಗಟ್ಟೆಯ ಮತದಾರರನ್ನು ಉಳಿಸಿಕೊಳ್ಳಬೇಕು, ಯಾರನ್ನು ಬೇರೆ ಮತಗಟ್ಟೆಗೆ ಸೇರ್ಪಡೆ ಮಾಡಬೇಕು, ಈ ಹಿಂದೆ ನಿರ್ದಿಷ್ಟ ಮತಗಟ್ಟೆಯ ವ್ಯಾಪ್ತಿಯಲ್ಲಿದ್ದ ಪ್ರದೇಶವು ಎರಡು ವಾರ್ಡ್‌ಗಳಿಗೆ ಹಂಚಿ ಹೋಗಿದ್ದರೆ, ಅಲ್ಲಿನ ಮತದಾರರನ್ನು ಯಾವ ಆಧಾರದಲ್ಲಿ ವಿಂಗಡಣೆ ಮಾಡಬೇಕು ಎಂಬ ಕುರಿತು ತರಬೇತಿ ನೀಡಲಾಯಿತು.

ADVERTISEMENT

‘ವಾರ್ಡ್‌ನ ಮಧ್ಯ ಭಾಗದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿಲ್ಲ. ಆದರೆ, ಗಡಿ ಭಾಗದ ಮತದಾರರನ್ನು ಯಾವ ವಾರ್ಡ್‌ಗೆ ಸೇರ್ಪಡೆಗೊಳಿಸಬೇಕು ಎಂಬ ಬಗ್ಗೆ ಸಣ್ಣಪುಟ್ಟ ಗೊಂದಲಗಳು ಬರುವುದು ಸಹಜ. ಈ ಸಲುವಾಗಿಯೇ ನಾವು ರಸ್ತೆ, ಗಲ್ಲಿ ಹಾಗೂ ಪ್ರತಿ ಮನೆಯನ್ನೂ ನಿಖರವಾಗಿ ಗುರುತಿಸಿದ್ದು, ಅದರ ಆಧಾರದಲ್ಲಿ ಮತದಾರರ ಪಟ್ಟಿ ತಯಾರಿಸುವಂತೆ ಸೂಚಿಸಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

’ಒಟ್ಟು ವಾರ್ಡ್‌ಗಳ ಸಂಖ್ಯೆ ಹಿಂದಿನಷ್ಟೇ (198) ಇರಲಿದೆ. ಆದರೆ, ಕೆಲವು ವಿಧಾನಸಭಾ ಕ್ಷೇತ್ರಗಳಿಗೆ ಈ ಹಿಂದೆ ಬೇರೆ ಕ್ಷೇತ್ರದಲ್ಲಿದ್ದ ವಾರ್ಡ್‌ಗಳ ಕೆಲವೊಂದು ಭಾಗಗಳು ಸೇರ್ಪಡೆಯಾಗಿವೆ. ಇಂತಹ ಕಡೆ ಮತದಾರರ ಹೆಸರು ಎರಡೆರಡು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸೇರ್ಪಡೆಗೊಳಿಸದಂತೆ ಎಚ್ಚರ ವಹಿಸಬೇಕಾಗುತ್ತದೆ. ಪರಿಷ್ಕೃತ ಪಟ್ಟಿ ತಯಾರಿಸುವಾಗ ಮತದಾರರ ಭಾವಚಿತ್ರ ಅದಲು ಬದಲಾಗದಂತೆ, ಹೆಸರು ತಪ್ಪಾಗದಂತೆ ಎಚ್ಚರವಹಿಸಬೇಕಾಗುತ್ತದೆ’ ಎಂದು ಚುನಾವಣಾ ಶಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

‘ಪಟ್ಟಿಯಲ್ಲಿ ಲೋಪಗಳಾಗುವುದನ್ನು ತಡೆಯಲು ವಾರ್ಡ್‌ನ ಗಡಿ ಪ್ರದೇಶಗಳಲ್ಲಿ ಪ್ರತಿ ಮನೆಗೂ ಹೋಗಿ ಎರಡೆರಡು ಬಾರಿ ಪರಿಷ್ಕೃತ ಪಟ್ಟಿಯನ್ನು ಪರಿಶೀಲಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ. ಈ ಕುರಿತ ಸಂಪೂರ್ಣ ವಿವರಗಳಿರುವ ಪುಸ್ತಕವನ್ನು ಸಿಬ್ಬಂದಿಗೆ ಒದಗಿಸಿದ್ದೇವೆ. ಮತದಾರರ ಪಟ್ಟಿಯ ಕರಡು ಸಿದ್ಧಗೊಂಡ ಬಳಿಕ ಅಕ್ಟೋಬರ್‌ 19ರಂದು ಕರಡನ್ನು ಪ್ರಕಟಿಸುತ್ತೇವೆ. ಅದಕ್ಕೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುತ್ತೇವೆ. ನವೆಂಬರ್‌ 30ರ ಒಳಗೆ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ’ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಂದಾಯ ಅಧಿಕಾರಿಗಳು, ಸಹಕಂದಾಯ ಅಧಿಕಾರಿಗಳು (ಎಆರ್‌ಒ), ಕಂದಾಯ ಪರಿವೀಕ್ಷಕರು (ಆರ್‌ಐ), ತೆರಿಗೆ ಪರಿವೀಕ್ಷಕರು, ಡೇಟಾ ಎಂಟ್ರಿ ಸಿಬ್ಬಂದಿ, ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಹಾಗೂ ಬೂತ್‌ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕೋವಿಡ್ ನಡುವೆಯೂ ಕಾರ್ಯನಿರ್ವಹಣೆ
ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕಾದ ಬಿಎಲ್‌ಒ, ಎಆರ್‌ಒ, ಆರ್‌ಒ, ಆರ್‌ಐ ಮುಂತಾದವರಿಗೆ ಕೊರೊನಾ ನಿಯಂತ್ರಣದ ಹೊಣೆಯೂ ಇದೆ. ಇವೆರಡನ್ನೂ ನಿಭಾಯಿಸಿಕೊಂಡು ಹೋಗಬೇಕಾದ ಅನಿವಾರ್ಯ ಎದುರಾಗಿದೆ.

‘ಕೊರೊನಾ ನಿಯಂತ್ರಣ ಹಾಗೂ ಚುನಾವಣಾ ಕಾರ್ಯಗಳೆರಡೂ ತುರ್ತು ಕಾರ್ಯಗಳು. ಹಾಗಾಗಿ ಈ ಎರಡು ಹೊಣೆಗಳನ್ನೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಭಾಳಿಸಿಕೊಂಡು ಹೋಗಬೇಕಿದೆ’ ಎಂದು ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ ಅಂಶ
1,400:
ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿರಬಹುದಾದ ಗರಿಷ್ಠ ಮತದಾರರು
750:ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿರಬಹುದಾದ ಕನಿಷ್ಠ ಮತದಾರರು
10,000:ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.