ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಮಂಗಳವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಲ್ಲಿ ಸಮಾಜ ಸೇವಕ ಶಶಿಧರ ಮ. ಮೀಸಿ ಹಾಗೂ ಬಿಬಿಎಂಪಿ ಮಾಜಿ ಅರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ. ಮುನಿರಾಜು ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಕೇಂದ್ರ ಸರ್ಕಾರದ ಪ್ರಾಯೋಜಿತ ಪಿಎಂ ಇ–ಡ್ರೈವ್ ಯೋಜನೆ ಅಡಿಯಲ್ಲಿ ಬೆಂಗಳೂರು ನಗರಕ್ಕೆ ಹಂಚಿಕೆ ಮಾಡುವ ಎಲೆಕ್ಟ್ರಿಕ್ ಬಸ್‌ಗಳಿಗೆ ನಮ್ಮ ಸಾರಿಗೆ ಸಂಸ್ಥೆಯ ಚಾಲಕರನ್ನೇ ನೇಮಿಸಲು ಅವಕಾಶ ನೀಡುವಂತೆ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಸಂಘ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪಿಎಂ ಇ–ಡ್ರೈವ್ ಯೋಜನೆಯಡಿ ಬಸ್ ಹಂಚಿಕೆ ಮಾಡಲು ಜಿಸಿಸಿ(ಗ್ರಾಸ್ ಕಾಸ್ಟ್ ಕಾಂಟ್ರ್ಯಾಕ್ಟ್) ಮಾದರಿಯಲ್ಲಿ ಟೆಂಡರ್ ಕರೆಯಲಾಗುತ್ತದೆ. ಈ ಟೆಂಡರ್ ಪಡೆದ ಕಂಪನಿಯು ಎಲೆಕ್ಟ್ರಿಕ್ ಬಸ್‌ನ ಜೊತೆಗೆ ಚಾಲಕರನ್ನು ನೇಮಿಸುತ್ತದೆ. ಕಂಪನಿಯು ಈ ಬಸ್‌ಗಳ ಸಂಪೂರ್ಣ ನಿರ್ವಹಣೆ ಮಾಡಲಿದೆ. ಹೊರಗಡೆಯಿಂದ ಬರುವ ಚಾಲಕರು ವಾಹನಗಳನ್ನು ಅಜಾಗರೂಕವಾಗಿ ಚಾಲನೆ ಮಾಡುವ ಸಾಧ್ಯತೆ ಇರುತ್ತದೆ. ನಮ್ಮ ಸಂಸ್ಥೆಯ ಚಾಲಕರು ಹೆಚ್ಚು ಜವಾಬ್ದಾರಿಯಿಂದ ಬಸ್ ಚಾಲನೆ ಮಾಡುವುದರಿಂದ, ಅವರನ್ನೇ ನೇಮಿಸುವಂತೆ ಷರತ್ತು ವಿಧಿಸಿದ್ದೇನೆ’ ಎಂದು ಮಾಹಿತಿ ನೀಡಿದರು.
‘ಬೆಂಗಳೂರು ನಗರದಲ್ಲಿ ಈಗಾಗಲೇ 1.40 ಕೋಟಿ ಜನಸಂಖ್ಯೆ ಇದೆ. ಆದ್ದರಿಂದ ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಉದ್ದೇಶದಿಂದ 10 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಬೆಂಗಳೂರು ನಗರಕ್ಕೆ ಹಂತ–ಹಂತವಾಗಿ 4,500 ಬಸ್‌ಗಳನ್ನು ಹಂಚಿಕೆ ಮಾಡುವುದಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.
‘ಸಾರಿಗೆ ಸಂಸ್ಥೆಗಳ ನೌಕರರ 38 ತಿಂಗಳ ಹಿಂಬಾಕಿ ವೇತನ ನೀಡುವುದು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರ ಸ್ಥಾನಮಾನ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ. ಮುನಿರಾಜು ಹಾಗೂ ಸಮಾಜ ಸೇವಕ ಶಶಿಧರ ಮ. ಮೀಸಿ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.