ADVERTISEMENT

ಎಲೆಕ್ಟ್ರಾನಿಕ್‌ ಸಿಟಿ: ರಸ್ತೆ ಬಳಕೆ ಶುಲ್ಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 20:30 IST
Last Updated 23 ಜೂನ್ 2021, 20:30 IST
ಅಂಕಿಅಂಶ
ಅಂಕಿಅಂಶ   

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ ಸಿಟಿ ಮತ್ತು ಅತ್ತಿಬೆಲೆ ನಡುವಣ ರಸ್ತೆ ಬಳಕೆ ಶುಲ್ಕವನ್ನು (ಟೋಲ್‌) ಹೆಚ್ಚಿಸಲಾಗಿದೆ. ಜುಲೈ 1ರಿಂದ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ.

ಮಾಸಿಕ ಪಾಸ್‌ ದರವನ್ನು ₹45 ಹೆಚ್ಚಿಸಲಾಗಿದೆ. ದ್ವಿಚಕ್ರ ವಾಹನ ಸವಾರರು ತಿಂಗಳಿಗೆ ₹625 ಪಾವತಿಸಬೇಕಾಗುತ್ತದೆ. ಕಾರು, ಜೀಪು, ವ್ಯಾನ್ ವಾಹನಗಳ ಬಳಕೆದಾರರು ತಿಂಗಳಿಗೆ ₹115 ಹೆಚ್ಚು ಪಾವತಿಸಬೇಕು. ಅಂದರೆ, ಈ ವಾಹನಗಳ ಬಳಕೆ ಶುಲ್ಕವನ್ನು ₹75ರಿಂದ ₹80ರಷ್ಟು ಹೆಚ್ಚಿಸಲಾಗಿದ್ದು, ಮಾಸಿಕ ಪಾಸ್‌ಗೆ ₹1,570 ಪಾವತಿಸಬೇಕು.

ಲಘು ವಾಣಿಜ್ಯ ವಾಹನಗಳು (ಎಲ್‌ಸಿವಿ) ಒಂದು ಸರದಿಗೆ ₹75 ಪಾವತಿಸಬೇಕು. ಈ ದರದಲ್ಲಿ ₹5 ಹೆಚ್ಚಿಸಲಾಗಿದೆ. ಹಿಂದಿರುಗಲು ₹110 ಪಾವತಿಸಬೇಕಾಗುತ್ತದೆ.

ADVERTISEMENT

ಈ ಮಾರ್ಗದಲ್ಲಿ ಹಲವು ಐಟಿ ಕಂಪನಿಗಳಿದ್ದು, ರಸ್ತೆ ಬಳಕೆದಾರರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಬೊಮ್ಮಸಂದ್ರದಲ್ಲಿಯೂ ನೂರಾರು ಕಂಪನಿಗಳು ಇವೆ. ಅಲ್ಲದೆ, ಕೆ.ಆರ್. ಮಾರುಕಟ್ಟೆಯನ್ನು ಸಿಂಗಸಂದ್ರಕ್ಕೂ ಸ್ಥಳಾಂತರಿಸಲಾಗಿದ್ದು, ಸಾವಿರಾರು ಜನ ಈ ಮಾರ್ಗದ ಮೂಲಕವೇ ಈ ಮಾರುಕಟ್ಟೆಗೆ ತೆರಳಬೇಕಾಗಿದೆ.

‘ಸಿಂಗಸಂದ್ರ ಹೋಗಬೇಕೆಂದರೆ ಈ ರಸ್ತೆಯಲ್ಲಿ ಮೇಲ್ಸೇತುವೆಯನ್ನು ಬಳಸಿಕೊಂಡು ಹೋಗಬೇಕು. ಈಗ ಟೋಲ್ ಹೆಚ್ಚಿಸಿರುವುದು ನಮಗೆ ಮತ್ತಷ್ಟು ಹೊರೆ ಎನಿಸಲಿದೆ. ಮೊದಲಿನಂತೆ, ಕೆ.ಆರ್. ಮಾರುಕಟ್ಟೆಯಲ್ಲಿಯೇ ವ್ಯಾಪಾರಕ್ಕೆ ಅನುಮತಿ ನೀಡಬೇಕು’ ಎಂದು ತರಕಾರಿ ವ್ಯಾಪಾರಿ ಗಜೇಂದ್ರ ಹೇಳಿದರು.

‘ಕಚೇರಿ ಕೆಲಸಗಳಿಗೆ, ಸರ್ಕಾರಿ ಕಚೇರಿಗಳಿಗೆ ಇದೇ ಮಾರ್ಗದ ಮೂಲಕವೇ ಸಾಗಬೇಕು. ಈಗ ರಸ್ತೆ ಬಳಕೆ ಶುಲ್ಕ ಹೆಚ್ಚಿಸಿರುವುದು ನಮ್ಮ ಸಂಕಷ್ಟವನ್ನು ಹೆಚ್ಚಿಸಿದೆ’ ಎಂದು ರಸ್ತೆ ಬಳಕೆದಾರ ವಿಜಯ್ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.