ADVERTISEMENT

ಮೆಜೆಸ್ಟಿಕ್‌ ಸಂಪರ್ಕಕ್ಕೆ ಎಲಿವೇಟೆಡ್‌ ಕಾರಿಡಾರ್‌!

ಹಡ್ಸನ್‌ ವೃತ್ತದಿಂದ ಮೆಜೆಸ್ಟಿಕ್‌ ಮೂಲಕ ಸುಮನಹಳ್ಳಿ 6/4 ಪಥದ ರಸ್ತೆ ನಿರ್ಮಿಸಲು ಸಿದ್ಧತೆ

ಪ್ರವೀಣ ಕುಮಾರ್ ಪಿ.ವಿ.
Published 20 ಮಾರ್ಚ್ 2019, 20:21 IST
Last Updated 20 ಮಾರ್ಚ್ 2019, 20:21 IST
   

ಬೆಂಗಳೂರು: ಎಲಿವೇಟೆಡ್‌ ಕಾರಿಡಾರ್‌ ವಿರುದ್ಧದ ಭುಗಿಲೆದ್ದ ಜನಾಕ್ರೋಶ ಇನ್ನೂ ತಣ್ಣಗಾಗಿಲ್ಲ. ಇದರ ಜೊತೆಗೇ ಸರ್ಕಾರ ಮೆಜೆಸ್ಟಿಕ್‌ ಸಂಪರ್ಕಿಸುವ ಇನ್ನೊಂದು 10 ಕಿ.ಮೀ ಉದ್ದದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸಲು ಸಿದ್ಧತೆ ನಡೆಸಿದೆ.

ಹಡ್ಸನ್‌ ವೃತ್ತದಿಂದ ಸುಮನಹಳ್ಳಿವರೆಗೆ ಈ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣವಾಗಲಿದೆ. ಹಡ್ಸನ್‌ ವೃತ್ತದಿಂದ ನೃಪತುಂಗ ರಸ್ತೆ– ಕೆ.ಆರ್‌.ವೃತ್ತ– ಶೇಷಾದ್ರಿ ರಸ್ತೆ– ಕೆಂಪೇಗೌಡ ಬಸ್‌ ನಿಲ್ದಾಣ (ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ) ಓಕಳೀಪುರ– ರಾಜಾಜಿನಗರ–ದಾಸಾಶ್ರಮ ರಸ್ತೆ– ಮಾಗಡಿ ರಸ್ತೆ ಮೂಲಕ ಈ ಕಾರಿಡಾರ್‌ ಹಾದುಹೋಗಲಿದೆ.

ಈ ಕಾರಿಡಾರ್‌ ನಿರ್ಮಿಸುವ ಹೊಣೆಯನ್ನೂ ಸರ್ಕಾರವು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್‌) ವಹಿಸಿದೆ. ಈ ಕಾರಿಡಾರ್‌ ಕೆಲವಡೆ ಆರು ಪಥ ಇನ್ನು ಕೆಲವೆಡೆ ನಾಲ್ಕು ಪಥಗಳನ್ನು ಒಳಗೊಳ್ಳಲಿದೆ. ಓಕಳಿಪುರದಲ್ಲಿ ಈಗಾಗಲೇ ಅಷ್ಟಪಥಗಳ ಮೇಲ್ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಇದರ ಮೇಲಿನಿಂದ ಹೊಸ ಕಾರಿಡಾರ್‌ ಹಾದುಹೋಗಲಿದೆ.

ADVERTISEMENT

ಈ ಎಲಿವೇಟೆಡ್‌ ಕಾರಿಡಾರ್‌ಗೆ ವಿಸ್ತ್ರತ ಕಾರ್ಯಸಾಧ್ಯತಾ ವರದಿ (ಡಿಎಫ್‌ಆರ್‌) ಸಿದ್ಧಪಡಿಸುವ ಸಲುವಾಗಿ ಕೆಆರ್‌ಡಿಸಿಎಲ್‌ ಪ್ರಸ್ತಾವಗಳನ್ನು ಆಹ್ವಾನಿಸಿದೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವಗಳ ಕುರಿತು ಕೋರಿಕೆ ಸಲ್ಲಿಸಲು ಇದೇ ಏಪ್ರಿಲ್‌ 4ರವರೆಗೆ ಕಾಲಾವಕಾಶ ನೀಡಲಾಗಿದೆ. ಏಪ್ರಿಲ್‌ 8ರಂದು ಪ್ರಸ್ತಾವಗಳ ಕುರಿತು ವಿವರಣಾ ಸಭೆ ಏರ್ಪಡಿಸಲಾಗಿದೆ. ಪ್ರಸ್ತಾವಗಳ ಸಲ್ಲಿಕೆಗೆ ಮೇ 15 ಕೊನೆಯ ದಿನ.

ಪ್ರಸ್ತಾವ ಸಿದ್ಧಪಡಿಸುವ ಸಂಸ್ಥೆಯ 10 ವರ್ಷಗಳಿಂದೀಚೆಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದಸಂಸ್ಥೆಗಳಿಗೆ ಡಿಎಫ್‌ಆರ್‌ ಅಥವಾ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿರಬೇಕು. ಐದು ವರ್ಷಗಳಲ್ಲಿ ಯಾವುದಾದರೂ ಒಂದು ರಸ್ತೆ ಅಭಿವೃದ್ಧಿ ಯೋಜನೆಗೆ (ಕನಿಷ್ಠ 8 ಕಿ.ಮೀ ಉದ್ದದ 6/4 ಪಥಗಳ ರಸ್ತೆ) ಕನಿಷ್ಠ ಒಂದು ಡಿಎಫ್‌ಆರ್‌ ಅಥವಾ ಡಿಪಿಆರ್‌ ಆದರೂ ತಯಾರಿಸಿರಬೇಕು. ಸಂಸ್ಥೆ ವಾರ್ಷಿಕ ವಹಿವಾಟು ಕಳೆದ ಐದು ವರ್ಷಗಳಲ್ಲಿ ಕನಿಷ್ಠ ಎರಡು ವರ್ಷಗಳಲ್ಲಿ ₹20 ಕೋಟಿ ದಾಟಿರಬೇಕು. ₹5 ಲಕ್ಷ ಭದ್ರತಾ ಠೇವಣಿ ಇಡಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆಯ ಬಸ್‌ಗಳಿಗೆ ಹಡ್ಸನ್‌ ವೃತ್ತದಿಂದ ಸುಮನಹಳ್ಳಿವರೆಗೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸಲು ಬಿಎಂಆರ್‌ಸಿಎಲ್‌ ಸಮಾಲೋಚನೆಯೊಂದಿಗೆ ಕಾರ್ಯಸಾಧ್ಯತಾ ಅಧ್ಯಯನ ನಡೆಸಬೇಕು ಎಂಬ ಅಂಶ ಲೋಕೋಪಯೋಗಿ,
ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಬಾಹ್ಯ ಅನುದಾನಿತ ಯೋಜನೆಗಳ ವಿಶೇಷಾಧಿಕಾರಿ ಅವರು ಕೆಆರ್‌ಡಿಸಿಎಲ್‌ಗೆ ಮಾ. 2ರಂದು ಬರೆದ ಪತ್ರದಲ್ಲಿದೆ.

ಆದರೆ, ಕೆಆರ್‌ಡಿಸಿಎಲ್‌ ಈ ಯೋಜನೆಗೆ ಪ್ರಸ್ತಾವ ಆಹ್ವಾನಿಸುವ ಕುರಿತು ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ನಲ್ಲಿ ಪ್ರಕಟಿಸಿರುವ ಪತ್ರದಲ್ಲಿ ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥವನ್ನು ಒಳಗೊಂಡ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸುವ ಪ್ರಸ್ತಾಪವಿದೆ. ಹಾಗಾಗಿ ಈ ಕಾರಿಡಾರ್‌ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಸೀಮಿತವೋ ಅಥವಾ ಇತರ ವಾಹನಗಳ ಬಳಕೆಗೂ ಅವಕಾಶ ಕಲ್ಪಿಸಲಾಗುತ್ತದೆಯೋ ಎಂಬ ಗೊಂದಲವಿದೆ. ಈ ಬಗ್ಗೆ ಸ್ಪಷ್ಟನೆ ಪಡೆಯಲು ಕೆಆರ್‌ಡಿಸಿಎಲ್‌ ಮುಖ್ಯ ಎಂಜಿನಿಯರ್‌ಗೆ ‘ಪ್ರಜಾವಾಣಿ’ ಕರೆ ಮಾಡಿದರೂ, ಅವರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.