ADVERTISEMENT

ಜೆ.ಸಿ.ರಸ್ತೆ: ಮಿನರ್ವ ಟು ಹಡ್ಸನ್‌ ವೃತ್ತದವರೆಗೆ ಎಲಿವೇಟೆಡ್‌ ಕಾರಿಡಾರ್‌

Published 6 ಅಕ್ಟೋಬರ್ 2022, 12:30 IST
Last Updated 6 ಅಕ್ಟೋಬರ್ 2022, 12:30 IST
   

ಬೆಂಗಳೂರು: ನಗರದಲ್ಲಿ ದಶಕದಿಂದ ಚಾಲ್ತಿಯಲ್ಲಿರುವ ಜೆ.ಸಿ. ರಸ್ತೆ ಮೂಲಕ ಸಾಗುವ ಮಿನರ್ವ ವೃತ್ತದಿಂದ ಹಡ್ಸನ್‌ ವೃತ್ತದವರೆಗಿನ ಮೇಲುಸೇತುವೆ ನಿರ್ಮಾಣ ವಿಷಯಕ್ಕೆ ಮತ್ತೆ ಜೀವಬಂದಿದೆ. ‘ಎಲಿವೇಟೆಡ್‌ ಕಾರಿಡಾರ್‌’ ಎಂಬ ಹೊಸ ಹೆಸರೂ ಸಿಕ್ಕಿದೆ.

ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಲ್ಲಿ ಬಿಬಿಎಂಪಿಗೆ ₹6 ಸಾವಿರ ಕೋಟಿ ಲಭ್ಯವಾಗುತ್ತಿದೆ. ಇದರಲ್ಲಿ ಹತ್ತಾರು ಬೃಹತ್‌ ಯೋಜನೆಗಳೂ ಸೇರಿದಂತೆ ವಾರ್ಡ್‌ವಾರು ಕಾಮಗಾರಿಗಳೂ ಸೇರಿವೆ.

‘ಸ್ಟೀಲ್‌ ಮೇಲುಸೇತುವೆಗೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಸಿಮೆಂಟ್‌ ಮೇಲುಸೇತುವೆಯನ್ನೇ ನಿರ್ಮಿಸಲು ನಿರ್ಧರಿಸಿ, ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಹಿಂದೆ ತಯಾರಿಸಲಾಗಿದ್ದ ಡಿಪಿಆರ್‌ನಲ್ಲೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಅಮೃತ ನಗರೋತ್ಥಾನ ಯೋಜನೆಯಲ್ಲಿ ‘ಎಲಿವೇಟೆಡ್‌ ಕಾರಿಡಾರ್‌’ಗೆ ₹213 ಕೋಟಿ ಅನುದಾನ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಟೆಂಡರ್‌ ಕರೆಯಲಾಗುತ್ತದೆ’ ಎಂದುಯೋಜನೆ ವಿಭಾಗ ಮುಖ್ಯ ಎಂಜಿನಿಯರ್‌ ಲೋಕೇಶ್‌ ತಿಳಿಸಿದರು.

ADVERTISEMENT

2.5 ಕಿ.ಮೀ: ‘ಮಿನರ್ವ ವೃತ್ತದಿಂದ ಜೆ.ಸಿ. ರಸ್ತೆ ಮಾರ್ಗವಾಗಿ ಹಡ್ಸನ್‌ ವೃತ್ತದವರೆಗೆ ‘ಎಲಿವೇಟೆಡ್‌ ಕಾರಿಡಾರ್‌’ ನಿರ್ಮಾಣವಾಗಲಿದೆ. ದ್ವಿಮುಖ ನಾಲ್ಕು ಪಥದ ಮೇಲುಸೇತುವೆ ಇದಾಗಿದೆ. ಇದರಿಂದ ವಾಹನ ದಟ್ಟಣೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಲಿದೆ’ ಎಂದರು.

ಜೆ.ಸಿ. ರಸ್ತೆ ಮೇಲುಸೇತುವೆ ಕಾಮಗಾರಿ 2009ರಲ್ಲಿಯೇ ಆರಂಭವಾಗಬೇಕಿತ್ತು. ಆಗ ಯೋಜನೆ ಮೊತ್ತ ₹86 ಕೋಟಿಯಾಗಿತ್ತು. ಪಾರಂಪರಿಕ ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ವಿರೋಧ ವ್ಯಕ್ತವಾಯಿತು. ಸುಮ್ಮನಾಗಿದ್ದ ಬಿಬಿಎಂಪಿ ಈ ಯೋಜನೆಗೆ ಮತ್ತೆ 2013ರಲ್ಲಿ ಚಾಲನೆ ನೀಡಿತ್ತು. ರಾಜ್ಯಮಟ್ಟದ ಉಸ್ತುವಾರಿ ಸಮಿತಿ, ಕೇಂದ್ರ ಮಂಜೂರು ಮತ್ತು ನಿರ್ವಹಣಾ ಸಮಿತಿ 2014ರಲ್ಲಿ ಯೋಜನೆಗೆ ಸಮ್ಮತಿ ಸೂಚಿಸಿದ್ದವು. ನಂತರ ಯೋಜನೆಯ ಬಗ್ಗೆ ಅಭಿಪ್ರಾಯ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಯನ್ನು (ಐಐಎಸ್‌ಸಿ) ಕೋರಲಾಗಿತ್ತು. ಅವರ ವರದಿಯ ನಂತರ 2016ರ ನಗರೋತ್ಥಾನ ಯೋಜನೆಯಲ್ಲಿ ಸ್ಟೀಲ್‌ ಮೇಲು ಸೇತುವೆಗೆ ₹135 ಕೋಟಿಗೆ ಅನುಮೋದನೆ ನೀಡಲಾಗಿತ್ತು. ಸ್ಟೀಲ್‌ ಮೇಲು ಸೇತುವೆಗೆ ಅತ್ಯಂತ ವಿರೋಧ ವ್ಯಕ್ತವಾದ್ದರಿಂದ ಅದು ಸ್ಥಗಿತಗೊಂಡಿತ್ತು.

ದ್ವಿಮುಖ ಸಂಚಾರ, 4 ಪಥ

‘ಎಲಿವೇಟೆಡ್‌ ಕಾರಿಡಾರ್‌’ನಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಇರುತ್ತದೆ. ನಾಲ್ಕು ಪಥಗಳನ್ನು ಇದು ಒಳಗೊಂಡಿರುತ್ತದೆ. ವಿ.ವಿ. ಪುರಂನಿಂದ ಬರುವ ವಾಹನಗಳು ಮಿನರ್ವ ವೃತ್ತದಲ್ಲಿ ಸೇತುವೆ ಹತ್ತಿ ಕೆ.ಜಿ. ರಸ್ತೆ ಮತ್ತು ಕಸ್ತೂರಬಾ ರಸ್ತೆಯ ಕಡೆಗೆ ಇಳಿಯಬಹುದು. ನೃಪತುಂಗ ರಸ್ತೆಯಿಂದ ಬರುವ ವಾಹನಗಳು ಹಡ್ಸನ್‌ ವೃತ್ತ ಬಳಿ ಮೇಲೇರಿ ಆರ್.ವಿ. ರಸ್ತೆ ಕಡೆಗೆ ಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.