ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಇಎಂಐ ಸೌಲಭ್ಯ

ಚಿಕಿತ್ಸಾ ವೆಚ್ಚವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ

ವರುಣ ಹೆಗಡೆ
Published 21 ಮೇ 2019, 19:43 IST
Last Updated 21 ಮೇ 2019, 19:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ವಾಹನ, ಮನೆ, ಎಲೆಕ್ಟ್ರಾನಿಕ್ ಸಾಧನಗಳ ಮೊತ್ತ ಪಾವತಿಗೆ ಸಿಗುತ್ತಿರುವ ಮಾಸಿಕ ಸಮಾನ ಕಂತುಗಳ ಸೌಲಭ್ಯ (ಇಎಂಐ) ಇನ್ನುಮುಂದೆ ನಗರದ ಖಾಸಗಿ ಆಸ್ಪತ್ರೆಗಳಲ್ಲೂ ದೊರೆಯಲಿದೆ. ₹ 1 ಲಕ್ಷಕ್ಕಿಂತಲೂ ದುಬಾರಿ ಚಿಕಿತ್ಸೆ ಪಡೆಯುವ ರೋಗಿಗಳು ಈ ಸೌಲಭ್ಯಕ್ಕೆ ಅರ್ಹರು.

ಚಿಕಿತ್ಸಾ ವೆಚ್ಚ ಅಧಿಕ ಎಂಬ ಕಾರಣಕ್ಕೆ ಬಡ–ಮಧ್ಯಮ ವರ್ಗದ ಕುಟುಂಬದ ಸದಸ್ಯರುಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲುಹಿಂದೇಟು ಹಾಕುತ್ತಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಚಿಕಿತ್ಸೆಯ ಪೂರ್ಣ ಮೊತ್ತವನ್ನು ಪಾವತಿಸುವುದು ಕಷ್ಟಸಾಧ್ಯ. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಎಂಬಂತೆ ನಗರದಲ್ಲಿನ ವಿವಿಧ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ)ದುಬಾರಿ ಚಿಕಿತ್ಸೆಗಳಿಗೆ ಇಎಂಐ ಸೌಲಭ್ಯ ಕಲ್ಪಿಸಲು ಮುಂದೆ ಬಂದಿದ್ದು, ಆಸ್ಪತ್ರೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿವೆ.

ಮುಂಬೈನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ಈಗಾಗಲೇ ಇಎಂಐ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಸೌಲಭ್ಯ ಪರಿಚಯಿಸಿದ ಬಳಿಕ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ, ಚಿಕಿತ್ಸೆ ಪಡೆಯುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ.ಇದೀಗ ಬೆಂಗಳೂರಿಗೂ ಈ ಸೇವೆ ಪ್ರವೇಶಿಸಿದ್ದು, ಎಚ್‌ಸಿಜಿ, ಆ್ಯಸ್ಟರ್ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಇಎಂಐ ಸೌಲಭ್ಯ ಪ್ರಾರಂಭಿಸಲಾಗಿದೆ. ಚಿಕಿತ್ಸಾ ಮೊತ್ತವನ್ನುವರ್ಷದವರೆಗೆ ಬಡ್ಡಿರಹಿತ ಸಮಾನ ಕಂತುಗಳ ಪಾವತಿಗೂ ಅವಕಾಶ ನೀಡಲಾಗುತ್ತಿದೆ.

ADVERTISEMENT

ಗುಣಮಟ್ಟದ ಆರೋಗ್ಯ ಸೇವೆ: ‘ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕೊರತೆಯಿಂದಾಗಿ ಕೆಲ ಸಂಕೀರ್ಣ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗುತ್ತಿದೆ. ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳಲ್ಲಿ ಚಿಕಿತ್ಸೆಗೆ ಪೂರ್ಣ ಪ್ರಮಾಣದ ಹಣ ಇರುವುದಿಲ್ಲ. ಹಾಗಾಗಿ ಕಂತುಗಳಲ್ಲಿ ಹಣ ಪಾವತಿ ಸೌಲಭ್ಯ ಕಲ್ಪಿಸುವ ವಿಚಾರವಾಗಿ ಎನ್‌ಜಿಒ, ವಿವಿಧ ಖಾಸಗಿ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಇಎಂಐ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದ ಎಲ್ಲಾ ರೋಗಿಗಳೂ ಗುಣಮಟ್ಟದ ಆರೋಗ್ಯ ಸೇವೆ ಪಡೆದುಕೊಳ್ಳಬಹುದು’ ಎಂದು ಎಚ್‌ಸಿಜಿ ಆಸ್ಪತ್ರೆ ಅಧ್ಯಕ್ಷ ಡಾ.ಬಿಎಸ್. ಅಜಯಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಇಎಂಐ ಸೌಲಭ್ಯ ಆರಂಭವಾದರೂ ಆರೋಗ್ಯ ವಿಮಾ ಸೇವೆಯಲ್ಲಿ ಯಾವುದೇ ತೊಡಕಾಗುವುದಿಲ್ಲ. ಅದೇ ರೀತಿ, ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಕೂಡ ಸರ್ಕಾರಿ ಆಸ್ಪತ್ರೆಗಳ ಜತೆಗೆ ರೆಫರಲ್ ಆಧಾರದ ಮೇಲೆ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಪಡೆಯಬಹುದಾಗಿದೆ. ಆರೋಗ್ಯ ವಿಮೆಗೆ ಒಳಪಡದ ಚಿಕಿತ್ಸೆಗಳಿಗೆ ಕೂಡ ಇಎಂಐ ಸೌಲಭ್ಯ ಪಡೆದುಕೊಳ್ಳಬಹುದು ಎನ್ನುವುದು ವೈದ್ಯರ ಅಭಿಮತ.

ಆಯ್ದ ಶಸ್ತ್ರಚಿಕಿತ್ಸೆಗೆ ಮಾತ್ರ ಸೌಲಭ್ಯ

‘ಮಾಸಿಕ ಕಂತಿನಹಲ್ಲಿ ಹಣ ಮರುಪಾವತಿ ಸೌಲಭ್ಯ ಕಲ್ಪಿಸುವ ವಿಚಾರವಾಗಿ ಬಜಾಜ್ ಫಿನ್ ಸರ್ವಿಸ್ ಹಾಗೂ ಫೆಡರಲ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ.ಅಪಘಾತ, ಅಂಗಾಂಗ ಕಸಿ ಹಾಗೂ ತೃತೀಯ ಹಂತದ ಶಸ್ತ್ರಚಿಕಿತ್ಸೆಗೆ ಒಳಪಡುವ ರೋಗಿಗಳು ಇದರ ಲಾಭ ಪಡೆದುಕೊಳ್ಳಬಹುದಾಗಿದೆ. ಪ್ರಾಯೋಗಿಕವಾಗಿ ಈ ಸೇವೆ ನೀಡಲಾಗುತ್ತಿದೆ’ ಎಂದು ಆ್ಯಸ್ಟರ್ ಹೆಲ್ತ್‌ ಕೇರ್‌ನ ನಿರ್ವಾಹಕ ನಿರ್ದೇಶಕ ಅಜಾದ್ ಮೂಪೆನ್ ಮಾಹಿತಿ ನೀಡಿದರು.

ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ವಿಸ್ತರಣೆ?

‘ವೈದ್ಯಕೀಯ ಚಿಕಿತ್ಸೆಗೆ ರೋಗಿಗಳಿಗೆಇಎಂಐ ಸೌಲಭ್ಯ ಕಲ್ಪಿಸುವ ವಿಚಾರವಾಗಿಹಲವು ಸಂಸ್ಥೆಗಳುನಮ್ಮೊಡನೆ ಮಾತುಕತೆಗೆ ಬಂದಿವೆ. ಆರೋಗ್ಯ ವಿಮೆಯಡಿ ನಗದುರಹಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿದ್ದೇವೆ. ಆರೋಗ್ಯ ವಿಮೆ ಹೊಂದಿರದ ರೋಗಿಗಳಿಗೆ ಇಎಂಐ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ, ನೇರವಾಗಿ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಲು ಸದ್ಯಕ್ಕೆ ಸೂಚಿಸಲಾಗುತ್ತದೆ. ನಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಕಲ್ಪಿಸುವ ಚಿಂತನೆ ನಡೆಯುತ್ತಿದೆ’ ಎಂದು ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ಸ್ ಒಕ್ಕೂಟದ ಅಧ್ಯಕ್ಷ ಡಾ.ಆರ್. ರವೀಂದ್ರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.