ADVERTISEMENT

ನಕಲಿ ಪ್ರಮಾಣ ಪತ್ರ: ವಸ್ತುಸ್ಥಿತಿ ವರದಿ ನೀಡಲು ನಿರ್ದೇಶನ

ಮಾಲಿನ್ಯ ಪರೀಕ್ಷೆಯ ನಕಲಿ ಪ್ರಮಾಣ ಪತ್ರ ನೀಡಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 20:10 IST
Last Updated 13 ಫೆಬ್ರುವರಿ 2019, 20:10 IST
   

ಬೆಂಗಳೂರು: ‘ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಲಿನ್ಯ ಪರೀಕ್ಷೆಯ ನಕಲಿ ಪ್ರಮಾಣ ಪತ್ರ ವಿತರಿಸುತ್ತಿರುವ ಕೇಂದ್ರಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ವಸ್ತುಸ್ಥಿತಿ ವರದಿಯನ್ನು ನಾಲ್ಕು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಹಾಯಕ ಆಯುಕ್ತರು ಮತ್ತು ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ (ಆರ್‌ಟಿಒ) ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ನಗರದ ಇ.ಎನ್. ರಾಘವೇಂದ್ರ ಮತ್ತು ಎಂ.ಬಿ.ನಾಗರಾಜ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪೊಲೀಸ್ ಹಾಗೂ ಸಾರಿಗೆ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಇದೊಂದು ಗಂಭೀರ ಪ್ರಕರಣ. ಅರ್ಜಿದಾರರು ಈ ಕುರಿತು 2010ರಲ್ಲಿಯೇ ದೂರು ಸಲ್ಲಿಸಿದ್ದರೂ ಏಕೆ ಕ್ರಮ ಜರುಗಿಸಿಲ್ಲ’ ಎಂದು ಪ್ರಶ್ನಿಸಿ ವಿಚಾರಣೆ ಮುಂದೂಡಿದೆ.

ADVERTISEMENT

ಆಕ್ಷೇಪ ಏನು? : ‘ನಗರದಲ್ಲಿ ನಕಲಿ ಪ್ರಮಾಣ ಪತ್ರ ವಿತರಿಸುತ್ತಿರುವ 21 ಮಾಲಿನ್ಯ ಪರೀಕ್ಷಾ ಕೇಂದ್ರಗಳ ವಿರುದ್ಧ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.