ADVERTISEMENT

ವಾಯು ಮಾಲಿನ್ಯ ತಪಾಸಣೆ ದುಬಾರಿ; ವಾಹನಗಳ ಮಾಲೀಕರಿಂದ ಖಂಡನೆ

ಸಾರಿಗೆ ಇಲಾಖೆ ಪರಿಷ್ಕೃತ ದರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 4:44 IST
Last Updated 19 ಜುಲೈ 2022, 4:44 IST
   

ಬೆಂಗಳೂರು: ವಾಹನಗಳ ವಾಯು ಮಾಲಿನ್ಯ ತಪಾಸಣೆ ದರ ಹೆಚ್ಚಳ ಮಾಡಲಾಗಿದ್ದು, ಸಾರಿಗೆ ಇಲಾಖೆಯ ಪರಿಷ್ಕೃತ ದರಕ್ಕೆ ವಾಹನಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಹಾಗೂ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಸಾರಿಗೆ ಇಲಾಖೆಯಿಂದ ದಂಡ ವಿಧಿಸಲಾಗುತ್ತಿದೆ. ಹೀಗಾಗಿ, ಎಲ್ಲ ವಾಹನಗಳ ವಾಯು ಮಾಲಿನ್ಯ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ರಾಜ್ಯದೆಲ್ಲೆಡೆ ತಪಾಸಣೆ ಕೇಂದ್ರಗಳನ್ನು ಖಾಸಗಿ ವ್ಯಕ್ತಿಗಳ ಸಹಯೋಗದಲ್ಲಿ ತೆರೆಯಲಾಗಿದೆ.

‘ಕೋವಿಡ್ ಲಾಕ್‌ಡೌನ್‌ ನಂತರ ಕ್ರಮೇಣ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿವೆ. ಕೋವಿಡ್ ಸಂದರ್ಭದಲ್ಲೇ ತತ್ತರಿಸಿದ್ದ ಸಾರಿಗೆ ಕ್ಷೇತ್ರವೂ ನಿಧಾನವಾಗಿ ಚಿಗುರೊಡೆಯುತ್ತಿದೆ. ಇಂಥ ಸಂದರ್ಭದಲ್ಲೇ ವಾಯು ಮಾಲಿನ್ಯ ತಪಾಸಣೆ ದರವನ್ನು ಏರಿಕೆ ಮಾಡಿರುವುದು ಖಂಡನೀಯ’ ಎಂದು ಕ್ಯಾಬ್ ಚಾಲಕನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಒಮ್ಮೆ ವಾಹನ ತಪಾಸಣೆ ಮಾಡಿದರೆ, ಅದರ ಪ್ರಮಾಣಪತ್ರದ ಮುಕ್ತಾಯದ ಅವಧಿ 6 ತಿಂಗಳು ಇರುತ್ತದೆ. ತಪಾಸಣೆ ದರವನ್ನು ದಿಢೀರ್ ಏರಿಕೆ ಮಾಡಲಾಗಿದ್ದು, ಇದರಿಂದ ವಾಹನಗಳ ಮಾಲೀಕರಿಗೆ ಹೊರೆ ಆಗುತ್ತಿದೆ’ ಎಂದು ದೂರಿದರು.

‘ವಾಹನಗಳ ಮಾಲೀಕರು ಹಾಗೂ ಚಾಲಕರ ಜೊತೆಯಲ್ಲಿ ಚರ್ಚಿಸಿ ದರ ಏರಿಕೆ ಬಗ್ಗೆ ತೀರ್ಮಾನಿಸಬೇಕಿತ್ತು. ಆದರೆ, ಯಾವುದೇ ಮುನ್ಸೂಚನೆ ನೀಡದೇ ದರ ಏರಿಕೆ ಮಾಡಿರುವುದು ನಿಯಮಬಾಹಿರ. ಈ ದರವನ್ನು ಕೂಡಲೇ ಹಿಂಪಡೆಯಬೇಕು’ ಎಂದೂ ಒತ್ತಾಯಿಸಿದರು.

ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಾರಿಗೆ ಇಲಾಖೆ ಆಯುಕ್ತ ಹಾಗೂ ಇ–ಆಡಳಿತ ವಿಭಾಗದ ಜಂಟಿ ಕಮಿಷನರ್ ಲಭ್ಯರಾಗಲಿಲ್ಲ.

‘ಮೂರು ತಿಂಗಳ ಹಿಂದೆಯೇ ಏರಿಕೆ: ಮನವಿ ಸಲ್ಲಿಕೆ’
‘ವಾಯು ಮಾಲಿನ್ಯ ತಪಾಸಣೆ ದರವನ್ನು ಮೂರು ತಿಂಗಳ ಹಿಂದೆಯೇ ಹೆಚ್ಚಳ ಮಾಡಲಾಗಿದೆ. ದರ ಇಳಿಕೆ ಮಾಡುವಂತೆ ಕೆಲ ವಾಹನಗಳ ಮಾಲೀಕರು ಮನವಿ ನೀಡಿದ್ದು, ಪರಿಶೀಲನೆ ನಡೆಯುತ್ತಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ವಾಹನ ಮಾದರಿ; ಹಳೇ ದರ; ಹೊಸ ದರ
ದ್ವಿಚಕ್ರ ವಾಹನ;
50; 65
ಕಾರು (ಪೆಟ್ರೋಲ್); 90; 115
ಕಾರು (ಡೀಸೆಲ್); 115; 160

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.