ADVERTISEMENT

ಬಿಡಿಎ: ಠಿಕಾಣಿ ಹೂಡಿದ ಸಿಬ್ಬಂದಿ ವರ್ಗಾವಣೆಗೆ ಕ್ರಮ

ಕಾಯ್ದೆ ತಿದ್ದುಪಡಿಗೆ ಶಿಫಾರಸು ಮಾಡಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 19:15 IST
Last Updated 30 ಜನವರಿ 2021, 19:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಹಲವಾರು ವರ್ಷಗಳಿಂದ ಠಿಕಾಣಿ ಕುಳಿತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಸಲುವಾಗಿ ಬಿಡಿಎ ಕಾಯ್ದೆಗೆ ತಿದ್ದುಪಡಿಗೆ ಶಿಫಾರಸು ಮಾಡುವ ಮಹತ್ವದ ನಿರ್ಧಾರವನ್ನು ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಶನಿವಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ‘ಬಿಡಿಎ ನೌಕರರು ಮತ್ತು ಅಧಿಕಾರಿಗಳನ್ನು ಬೇರೆ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ವರ್ಗಾವಣೆ ಮಾಡಲು ಬಿಡಿಎ ಕಾಯ್ದೆಯಲ್ಲಿ ಇದುವರೆಗೆ ಅವಕಾಶವಿರಲಿಲ್ಲ. ಸಿಬ್ಬಂದಿಯ ವರ್ಗಾವಣೆಗೆ ಅನುವು ಮಾಡಿಕೊಡಲು 1976ರ ಬಿಡಿಎ ಕಾಯ್ದೆಗೆ ತಿದ್ದುಪಡಿ ತಂದು, ಕಲಂ 50ಕ್ಕೆ ಉಪವಿಧಿ 3 ಅನ್ನು ಹೊಸದಾಗಿ ಸೇರ್ಪಡೆಗೊಳಿಸುವಂತೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ’ ಎಂದರು.

‘ಪ್ರಾಧಿಕಾರದ ನೌಕರರು ಮತ್ತು ಕೆಲವು ಅಧಿಕಾರಿಗಳು ಇಲ್ಲೇ ನೇಮಕಾತಿಯಾಗಿ ಇಲ್ಲಿಯೇ ನಿವೃತ್ತಿ ಹೊಂದುತ್ತಿದ್ದಾರೆ. ಇಂತಹವರಲ್ಲಿ ಕೆಲವರು ಅಕ್ರಮಗಳನ್ನು ಎಸಗುವ ಮೂಲಕ ಸಂಸ್ಥೆಗೆ ಕಪ್ಪು ಚುಕ್ಕೆ ತರುತ್ತಿದ್ದಾರೆ. ಇದರಿಂದ ಸಂಸ್ಥೆಗೆ ಆರ್ಥಿಕವಾಗಿಯೂ ನಷ್ಟವಾಗುತ್ತಿದೆ. ಈ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದರೆ ಸಿಬ್ಬಂದಿಯ ವರ್ಗಾವಣೆಗ ಮಾಡಬೇಕಾಗುತ್ತದೆ. ಈ ಸಲುವಾಗಿ ಬಿಡಿಎ ಕಾಯ್ದೆಗೆ ತಿದ್ದುಪಡಿ ಅಗತ್ಯ’ ಎಂದು ಪ್ರತಿಪಾದಿಸಿದರು.

ADVERTISEMENT

‘ಬಿಡಿಎ ಕಾಯ್ದೆ ತಿದ್ದುಪಡಿ ಜಾರಿಯಾದ ಬಳಿಕ ಪ್ರಾಧಿಕಾರದ ಅಧಿಕಾರಿಗಳು ಮತ್ತು ನೌಕರರನ್ನು ಕನಿಷ್ಠ ಒಂದು ವರ್ಷ ಮತ್ತು ಗರಿಷ್ಠ ಮೂರು ವರ್ಷಗಳವರೆಗೆ ರಾಜ್ಯದ ಇತರೆ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಮೂರು ವರ್ಷಗಳ ನಂತರ ಬಿಡಿಎಗೆ ಮರಳುವುದಕ್ಕೆ ಅವರು ಬಯಸಿದರೂ, ಆ ಬಗ್ಗೆ ಪ್ರಾಧಿಕಾರದ ಆಡಳಿತ ಮಂಡಳಿಯೇ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಫೆಬ್ರುವರಿಯಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಬಿಡಿಎ ಕಾಯ್ದೆಗೆ ತಿದ್ದುಪಡಿ ತಂದು ಅಂಗೀಕಾರ ಪಡೆಯಲು ಪ್ರಯತ್ನಿಸಲಾಗುತ್ತದೆ’ ಎಂದರು.

ಬನಶಂಕರಿ 6 ನೇ ಹಂತದ ಬಡಾವಣೆಗೆ ಕಾವೇರಿ ನೀರು ಪೂರೈಸುವಿಕೆ ವಿಳಂಬವಾಗಿತ್ತು. ಈ ಬಗ್ಗೆ ಅಲ್ಲಿನ ನಾಗರಿಕರು ಹಲವು ಬಾರಿ ಮನವಿ ಸಲ್ಲಿಸಿದ್ದರು.

‘ಬಡಾವಣೆಗೆ ಕುಡಿಯುವ ನೀರು ಪೂರೈಸುವ ಕಾಮಗಾರಿಯನ್ನು ಕೈಗೊಳ್ಳುವಂತೆ ಜಲಮಂಡಳಿಗೆ ಸೂಚನೆ ನೀಡಲಾಗಿದೆ. ಈ ಯೋಜನೆಗೆ ₹ 168 ಕೋಟಿ ವೆಚ್ಚವಾಗಲಿದೆ. ಒಟ್ಟು ವೆಚ್ಚದ ಮೂರನೇ ಒಂದರಷ್ಟು ಮೊತ್ತವನ್ನು ಜಲಮಂಡಳಿಗೆ ಬಿಡಿಎ ಪಾವತಿಸಲಿದೆ’ ಎಂದು ಅಧ್ಯಕ್ಷರು ಹೇಳಿದರು.

‘ಕೆಂಪೇಗೌಡ ಬಡಾವಣೆ ಮೂಲಸೌಕರ್ಯಕ್ಕೆ ₹ 650 ಕೋಟಿ’

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯ ಒದಗಿಸಲು ₹ 650 ಕೋಟಿ ಬಿಡುಗಡೆಗೆ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ಈ ಬಡಾವಣೆಯಲ್ಲಿ ಆಗಿರುವ ಮತ್ತು ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ವಿಸ್ತೃತ ವರದಿಯನ್ನು ಒಂದು ತಿಂಗಳೊಳಗೆ ಸಲ್ಲಿಸಬೇಕು ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಬಡಾವಣೆಗೆ ಮುಂಬರುವ ಡಿಸೆಂಬರ್ ಒಳಗೆ ಮೂಲಸೌಕರ್ಯ ಕಲ್ಪಿಸುವುದಾಗಿ ಬಿಡಿಎ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರಕ್ಕೆ (ರೇರಾ) ವಾಗ್ದಾನ ನೀಡಿದೆ. ಈ ಭರವಸೆ ಪ್ರಕಾರ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸಲು ಬಿಡಿಎ ಬದ್ಧವಾಗಿದೆ’ ಎಂದು ಅಧ್ಯಕ್ಷರು ತಿಳಿಸಿದರು.

‘ಶಿವರಾಮ ಕಾರಂತ ಬಡಾವಣೆಗೆ ಡಿಪಿಆರ್’

‘ಡಾ.ಶಿವರಾಮ ಕಾರಂತ ಬಡಾವಣೆಯನ್ನು ಅಭಿವೃದ್ಧಿಪಡಿಸಲು ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಲು ಸಲಹಾಸಂಸ್ಥೆಯನ್ನು ನೇಮಕ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ವಿಶ್ವನಾಥ್ ತಿಳಿಸಿದರು.

ಡಿನೋಟಿಫಿಕೇಷನ್‌ನಿಂದಾಗಿ ತ್ರಿಶಂಕುಸ್ಥಿತಿ ಎದುರಿಸುತ್ತಿದ್ದ ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿ ಯೋಜನೆಯನ್ನು ಕೈಬಿಡಲು ಬಿಡಿಎ ಈ ಹಿಂದೆ ನಿರ್ಧರಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ ಈ ಬಡಾವಣೆ ಅಭಿವೃದ್ಧಿಪಡಿಸಲೇ ಬೇಕು ಎಂದು ಆದೇಶ ಮಾಡಿತ್ತು. ಬಡಾವಣೆಯ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಪ್ರಕಟವಾದ ಬಳಿಕ ಆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದರು.

‘ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ಸಂದರ್ಭದಲ್ಲಿ ನಿಯಮಾನುಸಾರ ಅನುಮತಿ ಪಡೆದು ನಿರ್ಮಾಣವಾಗಿರುವ ಕಟ್ಟಡಗಳಿಗೆ ರಕ್ಷಣೆ ಒದಗಿಸಬೇಕು. ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಕಾನೂನುಬದ್ಧ ಕಟ್ಟಡಗಳನ್ನು ಕೆಡವಬಾರದು’ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್‌, ಈ ಸಲುವಾಗಿ ನಿವೃತ್ತ ನ್ಯಾ.ಚಂದ್ರಶೇಖರ್ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಿತ್ತು. ಬಿಡಿಎಯಲ್ಲಿ ಈ ಹಿಂದೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಐಎಎಸ್‌ ಅಧಿಕಾರಿ (ನಿವೃತ್ತ) ಜೈಕರ್‌ ಜೆರೋಮ್‌ ಹಾಗೂ ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಎಸ್‌.ಟಿ.ರಮೇಶ್‌ ಸಮಿತಿಯಲ್ಲಿದ್ದಾರೆ. ಸಮಿತಿಯು ಬಡಾವಣೆಗೆ ಗೊತ್ತುಪಡಿಸಿರುವ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ಬಗ್ಗೆ ವರದಿ ಸಿದ್ಧಪಡಿಸುತ್ತಿದೆ.

***

ಬಿಡಿಎಯಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಸಿಬ್ಬಂದಿಯ ವರ್ಗಾವಣೆ ಅಗತ್ಯ. ವರ್ಗಾವಣೆಗೆ ಅವಕಾಶ ಕಲ್ಪಿಸಲು ಬಿಡಿಎ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರ ಕೈಗೊಂಡಿದ್ದೇವೆ. ಭ್ರಷ್ಟ, ಸೋಮಾರಿ ಸಿಬ್ಬಂದಿಗೆ ಎಚ್ಚರಿಕೆಯ ಕರೆಗಂಟೆ ಇದು

- ಎಸ್‌.ಆರ್‌.ವಿಶ್ವನಾಥ್‌, ಬಿಡಿಎ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.