ADVERTISEMENT

ಮನೆ ಕೆಲಸದವರ ಹಕ್ಕಿಗಾಗಿ ಶಾಸನ ರಚಿಸಿ: ಗೃಹ ಕಾರ್ಮಿಕರ ವೇದಿಕೆ ಆಗ್ರಹ

ರಾಜ್ಯ ಸರ್ಕಾರಕ್ಕೆ ಕರ್ನಾಟಕ ಗೃಹ ಕಾರ್ಮಿಕರ ವೇದಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:23 IST
Last Updated 16 ಜೂನ್ 2025, 15:23 IST
ಕರ್ನಾಟಕ ಗೃಹ ಕಾರ್ಮಿಕರ ವೇದಿಕೆ ಅಧ್ಯಕ್ಷೆ ರುತ್ ಮನೋರಮಾ ಅವರು ಹೆಚ್ಚುವರಿ ಕಾರ್ಮಿಕ ಆಯುಕ್ತ ಮಂಜುನಾಥ್ ಅವರಿಗೆ ವಿವಿಧ ಬೇಡಿಕಗಳ ಮನವಿ ಸಲ್ಲಿಸಿದರು.
ಪ್ರಜಾವಾಣಿ ಚಿತ್ರ
ಕರ್ನಾಟಕ ಗೃಹ ಕಾರ್ಮಿಕರ ವೇದಿಕೆ ಅಧ್ಯಕ್ಷೆ ರುತ್ ಮನೋರಮಾ ಅವರು ಹೆಚ್ಚುವರಿ ಕಾರ್ಮಿಕ ಆಯುಕ್ತ ಮಂಜುನಾಥ್ ಅವರಿಗೆ ವಿವಿಧ ಬೇಡಿಕಗಳ ಮನವಿ ಸಲ್ಲಿಸಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಮನೆ ಕೆಲಸದವರ ಹಕ್ಕುಗಳಿಗಾಗಿ ರಾಜ್ಯ ಸರ್ಕಾರ ಶಾಸನ ರಚನೆ ಮಾಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಕಾನೂನು ರೂಪಿಸಬೇಕು ಎಂದು ಕರ್ನಾಟಕ ಗೃಹ ಕಾರ್ಮಿಕರ ವೇದಿಕೆ (ಕೆಜಿಕೆವಿ) ಆಗ್ರಹಿಸಿದೆ.

ವಿಶ್ವ ಗೃಹ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಸೋಮವಾರ ಕೆಜಿಕೆವಿ ಅಧ್ಯಕ್ಷೆ ರುತ್‌ ಮನೋರಮಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.

ಗೃಹ ಕಾರ್ಮಿಕರ ಹಕ್ಕು ಮತ್ತು ರಕ್ಷಣೆಯನ್ನು ಖಾತರಿಪಡಿಸಲು ಭಾರತ ಸರ್ಕಾರವು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸಿ 189 ನಿಯಮವನ್ನು ಅನುಮೋದಿಸಬೇಕು. ಕೆಲಸದ ಸ್ಥಳದಲ್ಲಿ ಆಗುವ ಲೈಂಗಿಕ ಕಿರುಕುಳ ತಡೆಯಲು ಜಿಲ್ಲಾ ಮಟ್ಟದ ಸಮಿತಿ ಅಥವಾ ಮೊಬೈಲ್‌ ದೂರು ಸಮಿತಿ ರಚಿಸಬೇಕು. ಸರ್ಕಾರಿ ಆರೋಗ್ಯ ವಿಮೆಯನ್ನು ಗೃಹ ಕಾರ್ಮಿಕರಿಗೂ ಅನ್ವಯಿಸಬೇಕು. ಭವಿಷ್ಯನಿಧಿ ಮತ್ತು ಪಿಂಚಣಿ ನೀಡಬೇಕು. ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದೆ.

ADVERTISEMENT

ಕೆಲಸದ ಸ್ಥಳದಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ತಾರತಮ್ಯ ವಿರೋಧಿ ಕಾನೂನು ಜಾರಿಗೊಳಿಸಬೇಕು. ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿ ಮಾಡಿಕೊಳ್ಳಬೇಕು. ವಾರ್ಷಿಕ ಬೋನಸ್‌, ಹಬ್ಬದ ಬೋನಸ್‌, ವಾರದ ರಜೆ, ಅನಾರೋಗ್ಯ ರಜೆ, ಸಾಂದರ್ಭಿಕ ರಜೆ, ಮಾತೃತ್ವ ರಜೆ ನೀಡಬೇಕು. ವಲಸೆ ಗೃಹ ಕಾರ್ಮಿಕರನ್ನು ಗುರುತಿಸಬೇಕು. ಕೆಲಸದಿಂದ ವಜಾಗೊಳಿಸುವ ಮೊದಲು ತಿಳಿಸಬೇಕು ಮತ್ತು ಪರಿಹಾರ ನೀಡಬೇಕು. ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.

ಹೆಚ್ಚುವರಿ ಕಾರ್ಮಿಕ ಆಯುಕ್ತ ಮಂಜುನಾಥ್‌, ಸಿವಿಕ್‌ ಬೆಂಗಳೂರು ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್‌, ಬಿಬಿಜಿಕೆಎಸ್‌ ಅಧ್ಯಕ್ಷೆ ಮುನಿಲಕ್ಷ್ಮೀ, ಕೆಬಿಬಿಜಿಎಸ್‌ನ ಸಿಸ್ಟರ್‌ ಸಹಾಯ, ಕೆಜಿಕೆವಿಯ ಕೇಮಾ ದೇವಿ, ಎಕೆಡಿಎನ್‌ಟಿವಿಯ ನಾಗಮ್ಮ, ಗ್ಲೋಬಲ್‌ ಕನ್ಸರ್ನ್‌ ಇಂಡಿಯಾದ ಬೃಂದಾ ಅಡಿಗೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.